ಚನ್ನೈ: ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರು ಹಿಂದಿಯಲ್ಲಿ ಬರೆದ ಪತ್ರಕ್ಕೆ ತಮಿಳಿನಲ್ಲಿ ಪ್ರತಿಕ್ರಿಯೆ ನೀಡಿರುವ ಡಿಎಂಕೆ ರಾಜ್ಯಸಭಾ ಸಂಸದ ಎಂ.ಎಂ.ಅಬ್ದುಲ್ಲ ಅವರು, ಪತ್ರದಲ್ಲಿರುವ ಒಂದಕ್ಷರವೂ ಅರ್ಥವಾಗಿಲ್ಲ ಎಂದು ಹೇಳಿದ್ದಾರೆ.
ರೈಲುಗಳಲ್ಲಿ ಪೂರೈಕೆ ಮಾಡುವ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಕುರಿತಂತೆ ಸಂಸದ ಅಬ್ದುಲ್ಲ ಅವರು ಕೇಳಿದ ಪ್ರಶ್ನೆಗೆ ರೈಲ್ವೆ ಮತ್ತು ಆಹಾರ ಸರಬರಾಜು ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರು ಹಿಂದಿಯಲ್ಲಿ ಉತ್ತರಿಸಿ ಪತ್ರ ಕಳುಹಿಸಿದ್ದರು.
ಎರಡು ಪತ್ರಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅಬ್ದುಲ್ಲ ಅವರು, ‘ಹಿಂದಿ ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಸಚಿವರ ಕಚೇರಿಯಲ್ಲಿರುವ ಅಧಿಕಾರಿಗಳಿಗೆ ಎಷ್ಟು ಮನವರಿಕೆ ಮಾಡಿದರೂ ಮತ್ತದೇ ಭಾಷೆಯಲ್ಲಿ ಪತ್ರಗಳನ್ನು ಕಳುಹಿಸುತ್ತಿದ್ದಾರೆ’ ಎಂದು ದೂರಿದ್ದಾರೆ.
‘ರೈಲ್ವೆ ಖಾತೆಯ ರಾಜ್ಯ ಸಚಿವರ ಕಚೇರಿಯಿಂದ ಬರುವ ಪತ್ರಗಳು ಯಾವಾಗಲೂ ಹಿಂದಿಯಲ್ಲಿರುತ್ತವೆ. ನಾನು ಅವರ ಕಚೇರಿಯಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಕರೆ ಮಾಡಿ ನನಗೆ ಹಿಂದಿ ಅರ್ಥವಾಗುತ್ತಿಲ್ಲ, ಇಂಗ್ಲೀಷ್‌ನಲ್ಲಿ ಪತ್ರ ಕಳುಹಿಸಿ ಎಂದು ಹೇಳಿದ್ದೇನೆ. ಆದರೂ ಪತ್ರವನ್ನು ಹಿಂದಿಯಲ್ಲಿ ಬರೆದು ಕಳುಹಿಸಿದ್ದಾರೆ. ಅವರಿಗೆ ಅರ್ಥವಾಗುವ ರೀತಿಯಲ್ಲೇ ನಾನು ಪ್ರತ್ಯುತ್ತರ ಕಳುಹಿಸಿದ್ದು, ಅವರು ಅದರಂತೆ ನಡೆದುಕೊಳ್ಳಲಿದ್ದಾರೆ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.
ಇನ್ನು ಮುಂದೆಯಾದರೂ ಪತ್ರಗಳನ್ನು ಇಂಗ್ಲೀಷ್‌ನಲ್ಲಿ ಕಳುಹಿಸುವಂತೆಯೂ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.