ಚೆನ್ನೈ: ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ನಮ್ಮ ಪಕ್ಷದ ಸಿದ್ಧಾಂತವನ್ನು ನಕಲು ಮಾಡಿದೆ ಎಂದು ಡಿಎಂಕೆ ತಿಳಿಸಿದ್ದು, ಟಿವಿಕೆಯ ತತ್ವಗಳು ವಿವಿಧ ಪಕ್ಷಗಳ ನಿಲುವುಗಳ ಬೆರಕೆಯಾಗಿವೆ ಎಂದು ಎಐಡಿಎಂಕೆ ಹೇಳಿದೆ.
ಭಾನುವಾರ ತಮ್ಮ ಪಕ್ಷದ ಮೊದಲ ಕಾರ್ಯಕ್ರಮದಲ್ಲೇ ಡಿಎಂಕೆ ಮತ್ತು ಅದರ ಕುಟುಂಬ ರಾಜಕೀಯವನ್ನು ವಿಜಯ್ ಗುರಿಯಾಗಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ಡಿಎಂಕೆ ನಾಯಕರು, ‘ನಮ್ಮ ರಾಜಕೀಯ ಜೀವನದಲ್ಲಿ ಎಷ್ಟೋ ಶತ್ರುಗಳನ್ನು ಕಂಡಿದ್ದು, ಇನ್ನೂ ಬಲಿಷ್ಠವಾಗಿಯೇ ಉಳಿಯಲಿದ್ದೇವೆ’ ಎಂದು ತಿಳಿಸಿದ್ದಾರೆ.
‘ನಮ್ಮ ನೀತಿಗಳನ್ನು ಅವರು (ವಿಜಯ್) ನಕಲು ಮಾಡುತ್ತಿದ್ದಾರೆ. ನಾವು ಈಗಾಗಲೇ ಹೇಳಿರುವುದನ್ನೇ ಅವರು ಹೇಳುತ್ತಿದ್ದಾರೆ’ ಎಂದು ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಹೇಳಿದ್ದಾರೆ.
‘ಇದು ಅವರ ಮೊದಲ ಸಮ್ಮೇಳನ, ಮುಂದೆ ನೋಡೋಣ. ನಾವು ಅದೆಷ್ಟೋ ಪಕ್ಷಗಳನ್ನು ನೋಡಿದ್ದೇವೆ. ಜನರ ಸಮಸ್ಯೆಗಳಿಗಾಗಿ ಹೋರಾಡಿ ಡಿಎಂಕೆ ನಾಯಕರು ಜೈಲಿಗೆ ಹೋಗಿದ್ದಾರೆ. ನಮ್ಮ ಪಕ್ಷ ಹಲವು ಚುನಾವಣೆಗಳನ್ನು ಸೋತಿದ್ದರೂ ಬಲಿಷ್ಠವಾಗಿಯೇ ಉಳಿದಿದೆ. ವಿಜಯ್ ಪಕ್ಷವು ರಾಜಕೀಯಕ್ಕೆ ಬಂದ ಕೆಲವೇ ದಿನಗಳಲ್ಲಿ ಅಧಿಕಾರಕ್ಕೇರುವ ಆಕಾಂಕ್ಷೆ ಹೊಂದಿದೆ. ಆದರೆ, ಜನರಿಗಾಗಿ ಹೋರಾಡುವ ಮೂಲಕ ಡಿಎಂಕೆ ಬೆಳೆಸಲಾಗಿದೆ. ‘ಇದೇ ಡಿಎಂಕೆ ಮತ್ತು ಇತರೆ ಪಕ್ಷಗಳ ನಡುವಿನ ವ್ಯತ್ಯಾಸ. ನಾವು ಬಲಿಷ್ಠವಾಗಿದ್ದು, ಜನರಿಗಾಗಿ ಕೆಲಸ ಮಾಡುತ್ತೇವೆ’ ಎಂದು ಇಳಂಗೋವನ್ ಹೇಳಿದ್ದಾರೆ.
ಟಿವಿಕೆಯ ಸಿದ್ಧಾಂತ ಹೊಸ ಬಾಟಲಿಗೆ ಹಳೆ ಮದ್ಯ ಹಾಕಿದಂತೆ. ಟಿವಿಕೆ ನಾಯಕ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ‘ಅವುಗಳನ್ನು ಕಾರ್ಯರೂಪಕ್ಕೆ ತರಲು ಅವರಿಗೆ ನಾವು ಸಮಯ ನೀಡೋಣ’ ಎಂದು ಎಐಡಿಎಂಕೆ ವಕ್ತಾರ ಕೋವೈ ಸತ್ಯಮ್ ತಿಳಿಸಿದ್ದಾರೆ.
ಸೈದ್ಧಾಂತಿಕವಾಗಿ ಬಿಜೆಪಿಯು ರಾಷ್ಟ್ರೀಯ ಪಕ್ಷ ಮತ್ತು ನಮ್ಮ ವೋಟ್ ಬ್ಯಾಂಕ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಿಜಯ್ ಅವರ ಪಕ್ಷವು ದ್ರಾವಿಡ ಪಕ್ಷಗಳ ವೋಟುಗಳನ್ನು ವಿಭಜನೆ ಮಾಡಲಿದೆ. ಇದರಿಂದ ಡಿಎಂಕೆ ಪಕ್ಷವು ದುರ್ಬಲಗೊಳ್ಳಬಹುದು. ದ್ರಾವಿಡ ಸಿದ್ಧಾಂತದ ಬಗ್ಗೆ ಮಾತನಾಡುವ ಮೂಲಕ ಆ ಪಕ್ಷಗಳ ವೋಟುಗಳನ್ನು ವಿಭಜನೆ ಮಾಡುವ ಪ್ರಯತ್ನದಿಂದ ವಿಜಯ್ ನಮಗೆ ಸಹಾಯ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕ ಎಚ್.ರಾಜಾ ಹೇಳಿದ್ದಾರೆ.
‘ಉದಯ’ ವಿರುದ್ಧ ಪಕ್ಷವು ಕಣಕ್ಕೆ ಇಳಿದಿದೆ. ಇದು ಡಿಎಂಕೆ ನಾಯಕ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ನ ವಿರುದ್ಧ ಎಂಬ ಸುಳಿವು ನೀಡಿದೆ ಎಂದು ಬಿಜೆಪಿ ನಾಯಕ ತಮಿಳ್‌ಇಸೈ ಸೌಂದರರಾಜನ್ ಹೇಳಿದ್ದಾರೆ.
ತಮಿಳು ರಾಷ್ಟ್ರೀಯವಾದಿ ಹಾಗೂ ನಮ್ ತಮಿಳರ್ ಕಚ್ಚಿಯ (ಎನ್‌ಟಿಕೆ) ನಾಯಕ ಸೀಮನ್ ಅವರು, ‘ಟಿವಿಕೆ ಪಕ್ಷವು ಇವಿಆರ್ ಪೆರಿಯಾರ್ ಹಾಗೂ ದ್ರಾವಿಡ ಸಿದ್ಧಾಂತವನ್ನು ಒಪ್ಪಿಕೊಂಡಿದೆ’. ಆದರೆ, ಎನ್‌ಟಿಕೆ ದ್ರಾವಿಡ ಸಿದ್ಧಾಂತವನ್ನು ತಿರಸ್ಕರಿಸಿದೆ. ಎನ್‌ಟಿಕೆಯ ರಾಜಕೀಯ ಸ್ಪಷ್ಟ ಸಿದ್ಧಾಂತದ ಮೇಲೆ ನಿಂತಿದೆ. ಯಾರನ್ನೂ ಅವಲಂಬಿಸಿಲ್ಲ. ಟಿವಿಕೆ ಪಕ್ಷವು ಪೆರಿಯಾರ್ ಅವರ ವೈಚಾರಿಕೆಯನ್ನು ಒಪ್ಪುತ್ತದೆ. ಆದರೆ, ಅವರ ನಾಸ್ತಿಕತೆಯನ್ನಲ್ಲ ಎಂದು ಟಿವಿಕೆ ಹೇಳಿದೆ. ಆದರೆ, ‘ನಾಸ್ತಿಕತೆಯು ವೈಚಾರಿಕತೆಯ ಭಾಗವೇ ಆಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.