ADVERTISEMENT

ಲಿಕ್ಕರ್ ಮಾಫಿಯಾದೊಂದಿಗೆ ನಂಟು ಹೊಂದಿರುವ ಡಿಎಂಕೆ ಸರ್ಕಾರ: ಬಿಜೆಪಿ ಆರೋಪ

ಪಿಟಿಐ
Published 22 ಜೂನ್ 2024, 13:00 IST
Last Updated 22 ಜೂನ್ 2024, 13:00 IST
   

ನವದೆಹಲಿ: ತಮಿಳುನಾಡಿನ ಕಲ್ಲಕುರಿಚ್ಚಿ ಜಿಲ್ಲೆಯಲ್ಲಿ ನಡೆದ ವಿಷಯುಕ್ತ ಮದ್ಯ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾಲಿನ್‌ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಆಡಳಿತಾರೂಢ ಡಿಎಂಕೆ ತಪಿತಸ್ಥರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ, ಪ್ರಕರಣದ ನೈತಿಕ ಹೊಣೆ ಹೊತ್ತು ರಾಜ್ಯ ಅಬಕಾರಿ ಸಚಿವ ಎಸ್. ಮುತ್ತುಸ್ವಾಮಿ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

‘ಇಲ್ಲಿಯವರೆಗೆ 53 ವ್ಯಕ್ತಿಗಳು ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಪ್ರಕರಣ ಸಂಬಂಧ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಆಡಳಿತರೂಢ ಡಿಎಂಕೆ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ’ ಎಂದು ಪೂನವಾಲ ಕಿಡಿಕಾರಿದರು.

ADVERTISEMENT

‘ರಾಜ್ಯದಲ್ಲಿ ಈ ಹಿಂದೆಯೂ ಇದೇ ರೀತಿಯ ಘಟನೆಗಳು ನಡೆದಿದ್ದವು. ಲಿಕ್ಕರ್ ಮಾಫಿಯಾ ಮತ್ತು ಡಿಎಂಕೆ ನಾಯಕರ ನಡುವೆ ನಂಟು ಇರುವ ಸಾಧ್ಯತೆ ಬಲವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಹೇಳಿದರು.

‘ಈ ಪ್ರಕರಣವನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು (ಎನ್‌ಸಿಎಸ್‌ಸಿ) ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಳ್ಳಬೇಕು. ತಮಿಳುನಾಡು ಸರ್ಕಾರ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಬೇಕು’ ಎಂದು ಹೇಳಿದರು.

ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕರ ಮೌನವನ್ನು ಪ್ರಶ್ನಿಸಿದ ಪೂನವಾಲಾ, ‘ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದಲಿತರು ಮತ್ತು ದಕ್ಷಿಣ ಭಾರತದ ಬಗ್ಗೆ ಹತ್ತಾರು ಬಾರಿ ಮಾತನಾಡಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ವಿಷಯದ ಬಗ್ಗೆ ಒಂದು ಮಾತು ಆಡುತ್ತಿಲ್ಲ. ಇದು ದಕ್ಷಿಣ ಭಾರತದ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ’ ಎಂದು ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.