ಚೆನ್ನೈ: ದೆಹಲಿಯ ಆಡಳಿತಾತ್ಮಕ ಸೇವೆಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರವು ತಂದಿರುವ ಸುಗ್ರೀವಾಜ್ಞೆಯನ್ನು ಬಲವಾಗಿ ವಿರೋಧಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಗುರುವಾರ ಹೇಳಿದರು. ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಬಿಕ್ಕಟ್ಟು ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಚೆನ್ನೈನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಾನ್ ಮಾನ್ ಅವರ ಜೊತೆ ಸಭೆ ನಡೆಸಿದ ಬಳಿಕ ಸ್ಟಾಲಿನ್ ಅವರು ಸುದ್ದಿಗಾರರ ಎದುರು ಮಾತನಾಡಿದರು. ‘ಎಎಪಿ ಪಕ್ಷಕ್ಕೆ ಸಂದಿಗ್ಧ ಪರಿಸ್ಥಿತಿ ತಂದೊಡ್ಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಚುನಾಯಿತ ಸರ್ಕಾರವು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಡ್ಡಿಪಡಿಸುತ್ತಿದೆ. ಎಎಪಿ ಪರವಾಗಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರ ಹೊರತಾಗಿಯೂ ಕೇಂದ್ರವು ಸುಗ್ರೀವಾಜ್ಞೆ ತಂದಿದೆ. ಇದನ್ನು ಡಿಎಂಕೆ ಬಲವಾಗಿ ವಿರೋಧಿಸುತ್ತದೆ’ ಎಂದು ಹೇಳಿದರು.
‘ಕೇಜ್ರಿವಾಲ್ ಅವರು ನನ್ನ ಉತ್ತಮ ಸ್ನೇಹಿತರು. ನಮ್ಮ ಸಭೆಯು ಫಲಪ್ರದವಾಯಿತು. ಕೇಂದ್ರದ ಸುಗ್ರೀವಾಜ್ಞೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿ ಮತ್ತು ನಾಯಕರು ಎಎಪಿಗೆ ಬೆಂಬಲ ನೀಡಬೇಕು’ ಎಂದು ಸ್ಟಾಲಿನ್ ಮನವಿ ಮಾಡಿದರು.
ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ವಿಪಕ್ಷಗಳ ವಿರೋಧವನ್ನು ಕ್ರೋಢೀಕರಿಸುವ ಪ್ರಯತ್ನದಲ್ಲಿ ಅರವಿಂದ ಕೇಜ್ರಿವಾಲ್ ಅವರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.