ADVERTISEMENT

ಅತ್ಯಾಚಾರ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆ ನಿರ್ಣಾಯಕ ಸಾಕ್ಷ್ಯವಲ್ಲ: ಹೈಕೋರ್ಟ್

ಪಿಟಿಐ
Published 30 ಜುಲೈ 2022, 10:21 IST
Last Updated 30 ಜುಲೈ 2022, 10:21 IST
ಬಾಂಬೆ ಹೈಕೋರ್ಟ್ – ಐಸ್ಟಾಕ್ ಚಿತ್ರ
ಬಾಂಬೆ ಹೈಕೋರ್ಟ್ – ಐಸ್ಟಾಕ್ ಚಿತ್ರ   

ಮುಂಬೈ: ‘ಅತ್ಯಾಚಾರ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆಯನ್ನು ನಿರ್ಣಾಯಕ ಸಾಕ್ಷ್ಯವೆನ್ನಲಾಗದು. ಪ್ರಕರಣದ ದೃಢೀಕರಣದ ಉದ್ದೇಶಕ್ಕಷ್ಟೇ ಡಿಎನ್‌ಎ ಪರೀಕ್ಷೆಯನ್ನು ಬಳಸಬಹುದು’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ, ನವೀ ಮುಂಬೈ ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಭಾರತಿ ಡಂಗ್ರೆ ಅವರು ಡಿಎನ್ಎ ಪರೀಕ್ಷೆಗೆ ಸಂಬಂಧಿಸಿದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜುಲೈ 26ರಂದು ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಆದೇಶದ ವಿಸ್ತೃತ ಪ್ರತಿ ಮಾಧ್ಯಮಗಳಿಗೆ ಲಭ್ಯವಾಗಿದೆ.

2020ರ ಸೆಪ್ಟೆಂಬರ್‌ನಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಬಾಲಕಿ ಮೇಲೆ 10 ದಿನಗಳಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪ ಆತನ ಮೇಲಿತ್ತು. ಸಂತ್ರಸ್ತೆಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿತ್ತು. ಆಕೆ ಗರ್ಭಿಣಿಯಾಗಿರುವುದೂ ತಿಳಿದುಬಂದಿತ್ತು.

ನವೀ ಮುಂಬೈಯ ನೇರುಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಸಂತ್ರಸ್ತೆಯು ಆರೋಪಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಪರಿಸ್ಥಿತಿಯ ಲಾಭ ಪಡೆದುಕೊಂಡು ಆರೋಪಿಯು ಆಕೆ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿತ್ತು.

ಡಿಎನ್‌ಎ ಪರೀಕ್ಷೆಯ ವರದಿ ನೆಗೆಟಿವ್ ಬಂದರೂ ಸಂತ್ರಸ್ತೆಯ ಹೇಳಿಕೆಯನ್ನು ನಂಬದೇ ಇರಲು ಕಾರಣಗಳಿಲ್ಲ. ಆಕೆ ಆರೋಪಿಯ ಮೇಲೆ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪಗಳನ್ನು ನಂಬದೇ ಇರಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.