ADVERTISEMENT

ಪ್ರಧಾನಿ ಮೋದಿಯ ಬಣ್ಣದ ಮಾತುಗಳಿಗೆ ಮರುಳಾಗಬೇಡಿ: ಪ್ರಿಯಾಂಕಾ ಗಾಂಧಿ

ಪಿಟಿಐ
Published 13 ಏಪ್ರಿಲ್ 2024, 10:46 IST
Last Updated 13 ಏಪ್ರಿಲ್ 2024, 10:46 IST
<div class="paragraphs"><p>ಪ್ರಿಯಾಂಕಾ ಗಾಂಧಿ</p></div>

ಪ್ರಿಯಾಂಕಾ ಗಾಂಧಿ

   

ರಾಮನಗರ(ಉತ್ತರಾಖಂಡ): ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಆಡುವ ಬಣ್ಣದ ಮಾತುಗಳಿಗೆ ಮರುಳಾಗಬೇಡಿ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮತದಾರರಿಗೆ ತಿಳಿಸಿದರು.

ರಾಮನಗರದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ದೇಶದ ನೈಜ ಸಮಸ್ಯೆಗಳ ಮೇಲೆ ಚುನಾವಣೆ ನಡೆಯಬೇಕೆ ಹೊರತು ಖಾಲಿ ಭಾಷಣಗಳ ಮೇಲಲ್ಲ ಎಂದರು.

ADVERTISEMENT

‘ಮೋದಿ ಅವರು ತಮ್ಮ ಭಾಷಣದಲ್ಲಿ ಬಳಸುವ ಪದಗಳಿಗೆ ಮರುಗಳಾಗಬೇಡಿ. ಮತ ಚಲಾಯಿಸುವ ಮುನ್ನ ಮೋದಿ ಸರ್ಕಾರದ 10 ವರ್ಷಗಳ ಆಡಳಿತದಲ್ಲಿ ನಿಮ್ಮ ಜೀವನದಲ್ಲಿ ನಿಜವಾಗಿಯೂ ಸಕಾರಾತ್ಮಕ ಬದಲಾವಣೆ ತಂದಿದೆಯೇ? ಎಂದು ನಿಮ್ಮನ್ನೇ ನೀವು ಪ್ರಾಮಾಣಿಕವಾಗಿ ಕೇಳಿಕೊಳ್ಳಿ’ ಎಂದು ಹೇಳಿದರು.

‘ಕಳೆದ ಚುನಾವಣೆಯಲ್ಲಿ ಜನರಿಗೆ ನೀಡಿದ ಅನೇಕ ಭರವಸೆಗಳನ್ನು ಮೋದಿ ಸರ್ಕಾರ ಈಡೇರಿಸಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿ, ದೇಶದ ಪ್ರತಿಯೊಬ್ಬ ನಾಗರಿಕನ ಬ್ಯಾಂಕ್‌ ಖಾತೆಗೆ ₹15 ಲಕ್ಷ ಜಮೆ ಮಾಡುವ ಭರವಸೆಗಳು ಹಾಗೆ ಉಳಿದಿವೆ. ಅಲ್ಲದೇ ಮತಕ್ಕಾಗಿ ಬಿಜೆಪಿಯವರು ಧರ್ಮವನ್ನೂ ಎಳೆದು ತರುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ವಿಧಾನಸಭೆ ಚುನಾವಣೆಗೂ ಮುನ್ನ ಹಿಮಾಚಲ ಪ್ರದೇಶವನ್ನು ದೇವ ಭೂಮಿ ಎಂದು ಮೋದಿ ಬಣ್ಣಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ತಿಂಗಳುಗಳ ನಂತರ ರಾಜ್ಯದಲ್ಲಿ ವಿಪತ್ತು ಸಂಭವಿಸಿ ಅಪಾರ ನಷ್ಟ ಅನುಭವಿಸಿದಾಗ ಮೋದಿ ಸರ್ಕಾರ ರಾಜ್ಯದ ಜನತೆಗೆ ನಯಾ ಪೈಸೆ ಪರಿಹಾರ ನೀಡಲಿಲ್ಲ. ರಾಜ್ಯ ಸರ್ಕಾರವು ತನ್ನ ಸ್ವಂತ ಸಂಪನ್ಮೂಲದಿಂದಲೇ ಪರಿಹಾರ ನೀಡಬೇಕಾಯಿತು. ರಾಜಕೀಯ ಲಾಭಕ್ಕಾಗಿ ದೇವಭೂಮಿ ಎಂಬ ಪದವನ್ನು ಬಿಜೆಪಿ ಬಳಸಿತ್ತು’ ಎಂದು ಹೇಳಿದರು.

ಲೋಕಸಭೆಗೆ ಏಳು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಉತ್ತರಾಖಂಡದಲ್ಲಿ ಏಪ್ರಿಲ್ 19ರಂದು ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.