ADVERTISEMENT

ಜನರಿಗೆ ಬೇಕಾಗಿರುವುದು ಸೆಲ್ಫಿಯೇ? ಸುಲಭ ರೈಲು ಪ್ರಯಾಣವೇ?: ರಾಹುಲ್ ಗಾಂಧಿ

ಪಿಟಿಐ
Published 30 ಡಿಸೆಂಬರ್ 2023, 10:52 IST
Last Updated 30 ಡಿಸೆಂಬರ್ 2023, 10:52 IST
   

ನವದೆಹಲಿ: ರೈಲು ನಿಲ್ದಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಇರುವ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪನೆ ಮಾಡುವ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ನಿಜವಾಗಿಯೂ ಜನರಿಗೆ ಬೇಕಾಗಿರುವುದು ಏನು? ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಜನರಿಗೆ ಬೇಕಾಗಿರುವುದು ಸುಲಭ ರೈಲು ಪ್ರಯಾಣವೇ? ಅಥವಾ ಶೆಹೆನ್‌ಶಾ(ಮೋದಿ) ಜೊತೆ ಸೆಲ್ಫಿಯೇ?’ ಎಂದು ಕೇಳಿದ್ದಾರೆ.

‘ರೈಲು ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ನೀಡುತ್ತಿದ್ದ ಟಕೆಟ್‌ ದರದಲ್ಲಿನ ವಿನಾಯತಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾಗಿದೆ. ಆದರೆ ಖಾಸಗೀಕರಣ ಮಾಡುವ ಕುರಿತು ಸರ್ಕಾರ ಹೆಚ್ಚು ಆಸಕ್ತಿ ಹೊಂದಿದೆ’ ಎಂದು ಟೀಕಿದ್ದಾರೆ.

ADVERTISEMENT

‘ನಾಗರಿಕರಿಂದ ತೆರಿಗೆ ರೂಪದಲ್ಲಿ ವಸೂಲಿ ಮಾಡಲಾಗುತ್ತಿರುವ ಹಣದಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆಯೇ? ಭಾರತೀಯರಿಗೆ ನಿಜವಾಗಿಯೂ ಬೇಕಾಗಿರುವುದು ಏನು? ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್, ಸುಲಭ ರೈಲು ಪ್ರಯಾಣ ಅಥವಾ ಸೆಲ್ಫಿಯೇ?’ ಎಂದು ಪ್ರಶ್ನಿಸಿದ್ದಾರೆ.

ಆರ್‌ಟಿಐ ಮಾಹಿತಿ ಹಂಚಿಕೊಂಡಿದ್ದ ಖರ್ಗೆ

ರೈಲ್ವೆ ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪನೆ ಮಾಡುವ ಸರ್ಕಾರದ ಯೋಜನೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಟೀಕಿಸಿದ್ದರು. ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ರೈಲ್ವೆ ವಿಭಾಗದಲ್ಲಿ ತಾತ್ಕಾಲಿಕ ಹಾಗೂ ಕಾಯಂ ಸೆಲ್ಫಿ ಬೂತ್‌ಗಳನ್ನು ಸ್ಥಾಪಿಸಲು ಉದ್ದೇಶಿಸಿರುವ ನಿಲ್ದಾಣಗಳ ಪಟ್ಟಿಯನ್ನೂ ಹಂಚಿಕೊಂಡಿದ್ದರು.

ಆರ್‌ಟಿಐ ಮಾಹಿತಿ ಪ್ರಕಾರ, ‘ಎ’ ಶ್ರೇಣಿಯಲ್ಲಿ ಬರುವ ನಿಲ್ದಾಣಗಳಲ್ಲಿ ತಲಾ ₹1.25 ಲಕ್ಷ ವೆಚ್ಚದಲ್ಲಿ ಹಾಗೂ ‘ಸಿ’ ಶ್ರೇಣಿಯ ನಿಲ್ದಾಣಗಳಲ್ಲಿ ₹6.25 ಲಕ್ಷ ವೆಚ್ಚದಲ್ಲಿ ಕಾಯಂ ಸೆಲ್ಫಿ ಬೂತ್‌ಗಳನ್ನು ಸ್ಥಾಪಿಸಲಾಗುತ್ತದೆ.

ಸೆಲ್ಫಿ ಪಾಯಿಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.