ADVERTISEMENT

ರೈತರ ಭೇಟಿಯಾಗದ ಬಿಜೆಪಿ; ನಮಗೆ ಇಂಥಾ ಸರ್ಕಾರ ಬೇಕಾ? ಎಂದು ರಾಕೇಶ್ ಟಿಕಾಯತ್ ಕಿಡಿ

ಪಿಟಿಐ
Published 24 ಫೆಬ್ರುವರಿ 2022, 3:29 IST
Last Updated 24 ಫೆಬ್ರುವರಿ 2022, 3:29 IST
ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್   

ನೋಯ್ಡಾ: ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ವರ್ಷಕ್ಕೂ ಹೆಚ್ಚು ಕಾಲ ನಡೆದ ಪ್ರತಿಭಟನೆ ವೇಳೆ ರೈತರನ್ನು ಬಿಜೆಪಿ ನಾಯಕರು ಭೇಟಿ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ‘ನಮಗೆ ಇಂತಹ ಸರ್ಕಾರ ಬೇಕಾ’ ಎಂದು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆ‍ಲೆಯಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾದ (ಎಸ್‌ಕೆಎಂ) ‘ಮಿಷನ್ ಯುಪಿ’ ಭಾಗವಾಗಿ ಬುಧವಾರ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್‌ ಸೇರಿದಂತೆ ಇತರೆ ರೈತ ಮುಖಂಡರೊಂದಿಗೆ ರಾಕೇಶ್ ಟಿಕಾಯತ್ ಅವರು ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಸಭೆ ನಡೆಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ಹಿಂದಿನ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ (ಎಸ್‌ಪಿ) ಸರ್ಕಾರ ಉತ್ತಮವಾಗಿತ್ತೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಹೊಲಿಸಿದರೆ ಅಂದಿನ ಸರ್ಕಾರ ಉತ್ತಮವಾಗಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಫೆ.27ರಂದು ಉತ್ತರ ಪ್ರದೇಶದಲ್ಲಿ ಐದನೇ ಹಂತದ ಮತದಾನ (ಭಾನುವಾರ) ನಡೆಯಲಿದೆ.

‘ದೆಹಲಿಯಲ್ಲಿ ನಾವು 13 ತಿಂಗಳ ಕಾಲ ಪ್ರತಿಭಟನೆ ನಡೆಸಿದ್ದೇವೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರನ್ನು ಭೇಟಿ ಮಾಡಲಿಲ್ಲ ಎಂಬ ವಿಚಾರವನ್ನು ಜನರು ತಿಳಿದಿರಬೇಕು. ಮುಂದಿನ ದಿನಗಳಲ್ಲಿ ದೇಶದಲ್ಲಿ ಯಾರಿಗಾದರೂ ಸಮಸ್ಯೆಯಾದರೆ 13 ತಿಂಗಳ ಕಾಲ ಪ್ರತಿಭಟನೆ ನಡೆಸುತ್ತಾರಾ? ಇಂತಹ ಸರ್ಕಾರ ನಮಗೆ ಬೇಕಾ ಎಂದು ಪ್ರಶ್ನಿಸಿದ್ದಾರೆ.

‘ಇತ್ತೀಚೆಗೆ ರಾಜಕೀಯ ಪಕ್ಷಗಳು ರೈತರ ಬಗ್ಗೆ ಮಾತನಾಡಲು ಪ್ರಾರಂಭಿಸಿವೆ. ಇದು ರೈತ ಸಂಘಟನೆಗಳ ದೊಡ್ಡ ಸಾಧನೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎಂಬುದು ನಮಗೆ ತಿಳಿದಿಲ್ಲ, ಆದರೆ, ಯಾರೇ ಸರ್ಕಾರ ರಚಿಸಿದರೂ ರೈತರ ಭರವಸೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಸರಕುಗಳ ಬೆಲೆಗಳನ್ನು ಪರಿಶೀಲಿಸುವ ಬದಲು ಜನರನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡದ ಕಾರಣ ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಷಯಗಳಿಲ್ಲ ಎಂದು ಟಿಕಾಯತ್‌ ಟೀಕಿಸಿದ್ದಾರೆ.

‘ಜನರೇ ಅವರಿಗೆ (ಬಿಜೆಪಿ) ತಕ್ಕ ಪಾಠ ಕಲಿಸಬೇಕು. ಪ್ರಶ್ನೆಗಳನ್ನು ಕೇಳಿ ಮತ್ತು ಉತ್ತರದಾಯಿತ್ವವನ್ನು ಹುಡುಕಬೇಕು. ದೇಶದ ಜನರು ಬಿಜೆಪಿಯವರನ್ನು ಪ್ರಶ್ನಿಸಲು ಪ್ರಾರಂಭಿಸಿದ್ದು ಇದೇ ಮೊದಲು’ ಎಂದು ಹೇಳಿದ್ದಾರೆ.

ಲಖಿಂಪುರ ಖೇರಿ ಪ್ರಕರಣ ಕುರಿತು ಮಾತನಾಡಿದ ಅವರು, ‘ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಹಿಂಸಾಚಾರದ ಪ್ರಮುಖ ಆರೋಪಿಯಾಗಿದ್ದಾರೆ. ಅವರನ್ನು ಬಿಡುಗಡೆ ಮಾಡಿರುವುದು ಸರಿಯಲ್ಲ’ ಎಂದಿದ್ದಾರೆ.

ಲಖಿಂಪುರ ಖೇರಿ ದುರಂತದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು.

2021ರ ನವೆಂಬರ್‌ 19ರಂದು ಸಂಸತ್ತಿನ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಹಿಂತೆಗೆಯಲ್ಪಟ್ಟ ಕೃಷಿ ಕಾಯ್ದೆಗಳು
1. ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು) ಕಾಯ್ದೆ – 2020
2. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಮತ್ತು ಕೃಷಿ ಜಮೀನು ಸೇವೆಗಳ ಒಪ್ಪಂದ ಕಾಯ್ದೆ – 2020
3. ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ –1955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.