ADVERTISEMENT

ಕೋಲ್ಕತ್ತ |ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ: ಪ್ರಾಚಾರ್ಯರ ಕರೆಗಳ ಪರಿಶೀಲನೆ

ಸಿಬಿಐನಿಂದ ಈವರೆಗೆ 20ಕ್ಕೂ ಅಧಿಕ ಮಂದಿ ವಿಚಾರಣೆ

ಪಿಟಿಐ
Published 18 ಆಗಸ್ಟ್ 2024, 15:18 IST
Last Updated 18 ಆಗಸ್ಟ್ 2024, 15:18 IST
<div class="paragraphs"><p>ವೈದ್ಯ ವಿದ್ಯಾರ್ಥಿನಿ ಕೊಲೆ ಘಟನೆ ಖಂಡಿಸಿ ಕೋಲ್ಕತ್ತದಲ್ಲಿ ಭಾನುವಾರ ಮಳೆಯನ್ನು ಲೆಕ್ಕಿಸಿದ ಜನರು ಪ್ರತಿಭಟನೆ ನಡೆಸಿದರು</p></div>

ವೈದ್ಯ ವಿದ್ಯಾರ್ಥಿನಿ ಕೊಲೆ ಘಟನೆ ಖಂಡಿಸಿ ಕೋಲ್ಕತ್ತದಲ್ಲಿ ಭಾನುವಾರ ಮಳೆಯನ್ನು ಲೆಕ್ಕಿಸಿದ ಜನರು ಪ್ರತಿಭಟನೆ ನಡೆಸಿದರು

   

–ಪಿಟಿಐ ಚಿತ್ರ 

ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಚಾರ್ಯ ಸಂದೀಪ್‌ ಘೋಷ್‌ ಅವರನ್ನು ಸತತ ಮೂರನೇ ದಿನವೂ ವಿಚಾರಣೆಗೆ ಒಳಪಡಿಸಿದ್ದಾರೆ.

ADVERTISEMENT

ಭಾನುವಾರ ವಿಚಾರಣೆಗೆ ಹಾಜರಾದ ಘೋಷ್ ಅವರಲ್ಲಿ, ಘಟನೆ ನಡೆಯುವ ಮುನ್ನ ಹಾಗೂ ಬಳಿಕ ಮಾಡಿರುವ ದೂರವಾಣಿ ಕರೆಗಳ ಮಾಹಿತಿ ನೀಡುವಂತೆ ಕೇಳಲಾಯಿತು ಎಂದು ಸಿಬಿಐ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘೋಷ್‌ ಅವರ ದೂರವಾಣಿ ಕರೆಗಳ ವಿವರಗಳನ್ನು ಪಡೆಯಲು ದೂರಸಂಪರ್ಕ ಕಂಪನಿಯ ನೆರವು ಪಡೆಯುವ ಚಿಂತನೆಯನ್ನೂ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸಿಬಿಐ ಅಧಿಕಾರಿಗಳು ಘೋಷ್‌ ಅವರನ್ನು ಶನಿವಾರ 13 ಗಂಟೆ ವಿಚಾರಣೆ ನಡೆಸಿದ್ದರು. ಬೆಳಿಗ್ಗೆ 11ರ ಸುಮಾರಿಗೆ ಆರಂಭವಾಗಿದ್ದ ವಿಚಾರಣೆ ತಡರಾತ್ರಿಯವರೆಗೂ ಮುಂದುವರಿದಿತ್ತು. ಭಾನುವಾರವೂ ಅವರು ಬೆಳಿಗ್ಗೆ 11ಕ್ಕೆ ಸಿಬಿಐ ಕಚೇರಿಗೆ ಬಂದರು.

‘ಅವರಲ್ಲಿ ಹಲವು ಪ್ರಶ್ನೆಗಳನ್ನು ಕೇಳಬೇಕಿದೆ’ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದರು. ‘ವೈದ್ಯ ವಿದ್ಯಾರ್ಥಿನಿಯ ಹತ್ಯೆ ಸುದ್ದಿ ತಿಳಿದ ನಂತರ ಯಾರನ್ನೆಲ್ಲಾ ಸಂಪರ್ಕಿಸಿದ್ದೀರಿ ಮತ್ತು ಸಂತ್ರಸ್ತೆಯ ಪೋಷಕರನ್ನು ಮೂರು ಗಂಟೆ ಕಾಯುವಂತೆ ಮಾಡಿದ್ದು ಏಕೆ’ ಎಂಬ ಪ್ರಶ್ನೆಗಳನ್ನು ಕೇಳಲಾಯಿತು ಎಂದರು.

ಈ ಘಟನೆಯ ಬೆನ್ನಲ್ಲೇ ಸೆಮಿನಾರ್‌ ಹಾಲ್‌ನ ಸಮೀಪದ ಕೊಠಡಿಗಳ ನವೀಕರಣ ಕೆಲಸಕ್ಕೆ ಸೂಚನೆ ನೀಡಿದ್ದು ಏಕೆ ಎಂಬ ಬಗ್ಗೆಯೂ ಅವರನ್ನು ಪ್ರಶ್ನಿಸಲಾಗಿದೆ.

‘ಈ ಘಟನೆಯ ಹಿಂದೆ ಯಾವುದೇ ಪಿತೂರಿ ನಡೆದಿದೆಯೇ ಅಥವಾ ಇದು ಪೂರ್ವಯೋಜಿತ ಕೃತ್ಯವೇ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಪ್ರಾಂಶುಪಾಲರು ಯಾವುದಾದರೂ ರೀತಿಯಲ್ಲಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಬೇಕಿದೆ’ ಎಂದು ಹೇಳಿದರು. 

ಅತ್ಯಾಚಾರ ಮತ್ತು ಕೊಲೆ ಘಟನೆ ನಡೆದ ಎರಡು ದಿನಗಳ ಬಳಿಕ ಘೋಷ್‌ ಅವರು ಪ್ರಾಂಶುಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸಿಬಿಐ ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 20ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಗುರುತು ಬಹಿರಂಗ– ಸಮನ್ಸ್: ಈ ಘಟನೆ ಬಗ್ಗೆ ಗಾಳಿ ಸುದ್ದಿ ಹರಡಿದ ಮತ್ತು ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಆರೋಪದಲ್ಲಿ ಕೋಲ್ಕತ್ತ ಪೊಲೀಸರು ಭಾನುವಾರ ಬಿಜೆಪಿಯ ಮಾಜಿ ಸಂಸದ ಲಾಕೆಟ್‌ ಚಟರ್ಜಿ ಹಾಗೂ ಇತರ ಇಬ್ಬರು ವೈದ್ಯರಿಗೆ ಸಮನ್ಸ್‌ ಜಾರಿಮಾಡಿದ್ದಾರೆ. ಈ ಮೂವರಿಗೆ ಅಲ್ಲದೆ, ಘಟನೆ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸಿದ ಇತರ 57 ಮಂದಿಗೂ ಸಮನ್ಸ್‌ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಆರೋಪದಲ್ಲಿ ವೈದ್ಯರಾದ ಕುನಾಲ್‌ ಸರ್ಕಾರ್‌ ಮತ್ತು ಸುವರ್ಣ ಗೋಸ್ವಾಮಿ ಅವರಿಗೆ ಸಮನ್ಸ್ ನೀಡಿ, ಕೋಲ್ಕತ್ತ ಪೊಲೀಸ್‌ ಕೇಂದ್ರ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ’ ಎಂದರು.

ಈಸ್ಟ್‌ ಬೆಂಗಾಲ್‌ ಮತ್ತು ಮೋಹನ್ ಬಾಗನ್‌ ಫುಟ್‌ಬಾಲ್‌ ಕ್ಲಬ್‌ಗಳ ಬೆಂಬಲಿಗರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು

ದಿನದ ಇತರ ಬೆಳವಣಿಗೆ

* ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಘಟನೆ ಖಂಡಿಸಿ ವೈದ್ಯರ ಪ್ರತಿಭಟನೆ ಮುಷ್ಕರ ನಡೆಸುತ್ತಿರುವುದಿಂದ ತಮ್ಮ ತಮ್ಮ ರಾಜ್ಯಗಳಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರತಿ ಎರಡು ಗಂಟೆಗೊಮ್ಮೆ ಮಾಹಿತಿ ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

* ಘಟನೆಗೆ ಸಂಬಂಧಿಸಿದಂತೆ ಕೋಲ್ಕತ್ತ ಪೊಲೀಸ್‌ ಆಯುಕ್ತರನ್ನು ಸಿಬಿಐ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಕ್ಕೆ ಟಿಎಂಸಿ ಸಂಸದ ಸುಖೇಂದು ಶೇಖರ್‌ ರಾಯ್‌ ಅವರಿಗೆ ಕೋಲ್ಕತ್ತ ಪೊಲೀಸರು ಸಮನ್ಸ್‌ ಜಾರಿಗೊಳಿಸಿದ್ದಾರೆ.

* ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸುತ್ತಲೂ ಭಾನುವಾರದಿಂದ ಆಗಸ್ಟ್‌ 24ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಭೆ ಆಯೋಜನೆ ಜನರು ಗುಂಪು ಸೇರುವುದಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.

ಜತೆಯಾದ ಈಸ್ಟ್‌ ಬೆಂಗಾಲ್ ಬಾಗನ್ ಅಭಿಮಾನಿಗಳು

ವೈದ್ಯ ವಿದ್ಯಾರ್ಥಿನಿ ಕೊಲೆ ಘಟನೆ ಖಂಡಿಸಿ ಈಸ್ಟ್‌ ಬೆಂಗಾಲ್‌ ಮತ್ತು ಮೋಹನ್‌ ಬಾಗನ್‌ ಫುಟ್‌ಬಾಲ್‌ ತಂಡಗಳ ಅಭಿಮಾನಿಗಳು ಕೋಲ್ಕತ್ತದ ಸಾಲ್ಟ್‌ಲೇಕ್‌ ಕ್ರೀಡಾಂಗಣದ ಬಳಿ ಭಾನುವಾರ ಜತೆಯಾಗಿ ಪ್ರತಿಭಟನೆ ನಡೆಸಿದರು.  ಎರಡೂ ತಂಡಗಳ ನೂರಕ್ಕೂ ಅಧಿಕ ಬೆಂಬಲಿಗರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತ್ರಸ್ತೆಯ ಕುಟುಂಬಕ್ಕೆ ಶೀಘ್ರ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.  ‘ಬದ್ಧ ಎದುರಾಳಿ’ ಎನಿಸಿರುವ ಈಸ್ಟ್ ಬೆಂಗಾಲ್‌ ಮತ್ತು ಬಾಗನ್‌ ತಂಡಗಳ ನಡುವಣ ಫುಟ್‌ಬಾಲ್‌ ಪಂದ್ಯವು ‘ಕೋಲ್ಕತ್ತ ಡರ್ಬಿ’ ಎಂದೇ ಪ್ರಸಿದ್ಧಿ ಪಡೆದಿದೆ. ಈ ತಂಡಗಳ ಮಧ್ಯೆ ಭಾನುವಾರ ನಡೆಯಬೇಕಿದ್ದ ಡುರಾಂಡ್‌ ಕಪ್‌ ಟೂರ್ನಿಯ ಪಂದ್ಯವನ್ನು ರದ್ದುಗೊಳಿಸಲಾಯಿತು. 

ಮಮತಾಗೆ ಹರಭಜನ್‌ ಪತ್ರ

ನವದೆಹಲಿ/ ಚಂಡೀಗಢ: ಎಎಪಿ ಸಂಸದ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಹರಭಜನ್‌ ಸಿಂಗ್‌ ಅವರು ಸಂತ್ರಸ್ತೆಗೆ ಶೀಘ್ರ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಸಿ.ವಿ.ಆನಂದ್ ಬೋಸ್‌ ಅವರಿಗೆ ಪತ್ರ ಬರೆದಿದ್ದಾರೆ.  ‘ಈ ಘಟನೆ ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಅಲ್ಲಾಡಿಸಿದೆ. ವೈದ್ಯ ವಿದ್ಯಾರ್ಥಿನಿಗೆ ನ್ಯಾಯ ಲಭಿಸುವುದು ವಿಳಂಬವಾಗುತ್ತಿರುವುದು ತೀವ್ರ ದುಃಖ ಉಂಟುಮಾಡಿದೆ. ತಪ್ಪಿತಸ್ಥರನ್ನು ಶೀಘ್ರ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ಪತ್ರ ಬರೆದಿದ್ದೇನೆ’ ಎಂದು ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.