ADVERTISEMENT

ತಮಿಳುನಾಡು: ವೈದ್ಯನಿಗೆ ಹಲವು ಬಾರಿ ಚಾಕುವಿನಿಂದ ಇರಿದ ರೋಗಿಯ ಸಂಬಂಧಿಕರು!

ಇ.ಟಿ.ಬಿ ಶಿವಪ್ರಿಯನ್‌
Published 13 ನವೆಂಬರ್ 2024, 9:38 IST
Last Updated 13 ನವೆಂಬರ್ 2024, 9:38 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚೆನ್ನೈ: ಇಲ್ಲಿನ ಕಲೈನರ್ ಸೆಂಟಿನರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದು (ಬುಧವಾರ) ಬೆಳಗ್ಗೆ ಕರ್ತವ್ಯ ನಿರತ ವೈದ್ಯರೊಬ್ಬರಿಗೆ (ಕ್ಯಾನ್ಸರ್ ತಜ್ಞ) ರೋಗಿಯ ಸಂಬಂಧಿಕರು ಹಲವು ಬಾರಿ ಚಾಕುವಿನಿಂದ ಇರಿದಿರುವ ಆಘಾತಕಾರಿ ಘಟನೆ ನಡೆದಿದೆ.

ತೀವ್ರವಾಗಿ ಗಾಯಗೊಂಡಿರುವ ವೈದ್ಯ ಜೆ. ಬಾಲಾಜಿ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಆಸ್ಪತ್ರೆಯಲ್ಲಿ ಬಾಲಾಜಿ ಅವರು ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ನಿರತರಾಗಿದ್ದರು. ಇದೇ ಸಂದರ್ಭದಲ್ಲಿ ಚಾಕುವಿನಿಂದ ಏಕಾಏಕಿ ದಾಳಿ ನಡೆಸಿದ ಆರೋಪಿಗಳು, ಬಾಲಾಜಿಯವರ ಕುತ್ತಿಗೆ ಸೇರಿ ದೇಹದ ವಿವಿಧ ಭಾಗಗಳಿಗೆ ಹಲವು ಬಾರಿ ಇರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

26 ವರ್ಷದ ಆರೋಪಿಯ ತಾಯಿಯು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸಿತ್ತು. ಇದರಿಂದಾಗಿ ಕೋಪಗೊಂಡ ಆರೋಪಿ, ಸಹಚರರೊಂದಿಗೆ ಸೇರಿ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಖಂಡಿಸಿದ್ದಾರೆ. ಘಟನೆ ಸಂಬಂಧ ಆರೋಪಿ ಸೇರಿ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ಆರೋಗ್ಯ ಸಚಿವ ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಆಘಾತ ವ್ಯಕ್ತಪಡಿಸಿದ್ದಾರೆ. ವೈದ್ಯರೊಂದಿಗೆ ಚರ್ಚೆ ನಡೆಸುತ್ತೇನೆ. ಜತೆಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಭದ್ರತಾ ಸೌಲಭ್ಯಗಳನ್ನು ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.

'ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಸರ್ಕಾರಿ ವೈದ್ಯರ ಸೇವೆ ಅಪಾರ. ಕೆಲಸದ ಸಮಯದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದೆ’ ಎಂದು ಸುಬ್ರಮಣಿಯನ್ ಹೇಳಿದ್ದಾರೆ.

ಮೇ ತಿಂಗಳಲ್ಲಿ ಕೋಲ್ಕತ್ತದ ಆರ್‌.ಜಿ ಕರ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಘಟನೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.