ADVERTISEMENT

ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ: ಮಮತಾ ಗಡುವು; ಕಿರಿಯ ವೈದ್ಯರ ಕಿಡಿ

ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ–ಕೊಲೆ ಪ್ರಕರಣ

ಪಿಟಿಐ
Published 12 ಆಗಸ್ಟ್ 2024, 15:21 IST
Last Updated 12 ಆಗಸ್ಟ್ 2024, 15:21 IST
.
.   

ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣವನ್ನು ಪರಿಹರಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪೊಲೀಸರಿಗೆ ಭಾನುವಾರದವರೆಗೆ ಗಡುವನ್ನು ಏಕೆ ನೀಡಿದ್ದಾರೆ ಎಂದು ಸರ್ಕಾರಿ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಸೋಮವಾರ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ನೀಡಿರುವ ಪಾರದರ್ಶಕ ತನಿಖೆಯ ಭರವಸೆ ಹೊರತಾಗಿಯೂ ಪ್ರತಿಭಟನಕಾರರು ನ್ಯಾಯಾಂಗ ತನಿಖೆ, ಅಪರಾಧಿಗಳಿಗೆ ಮರಣದಂಡನೆ ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ ಸಾಕಷ್ಟು ಪರಿಹಾರ ನೀಡುವಲ್ಲಿ ಆಗಿರುವ ವಿಳಂಬವನ್ನು ಟೀಕಿಸಿದರು.

ತನಿಖೆಯ ಬಗ್ಗೆ ಹರಡಿರುವ ವದಂತಿಗಳಿಗೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಆಸ್ಪತ್ರೆಯ ಎಲ್ಲ ಹಿರಿಯ ಅಧಿಕಾರಿಗಳನ್ನು ತೆಗೆದುಹಾಕಬೇಕು, ಅವರನ್ನು ಬೇರೆಡೆ ನಿಯೋಜಿಸಬಾರದು ಎಂದು ಒತ್ತಾಯಿಸಿದರು.

ADVERTISEMENT

‘ತನಿಖೆಯ ಬಗ್ಗೆ ನಮಗೆ ಅಸಮಾಧಾನವಿದೆ. ನಮ್ಮ ಬೇಡಿಕೆ ಸ್ಪಷ್ಟವಾಗಿವೆ’ ಎಂದು ಕಿರಿಯ ವೈದ್ಯರೊಬ್ಬರು ಹೇಳಿದರು.

ಅತ್ಯಾಚಾರ–ಕೊಲೆ ಖಂಡಿಸಿ ಇಲ್ಲಿನ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸ್ಥಾನಿಕ ವೈದ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ತುರ್ತು ಚಿಕಿತ್ಸೆ ಹೊರತುಪಡಿಸಿ, ಉಳಿದ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದರು.

ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ಸ್ಥಾನಿಕ ವೈದ್ಯರ ಸಂಘಗಳ ಒಕ್ಕೂಟವು (ಫೋರ್ಡಾ) ಸೋಮವಾರ ದೇಶವ್ಯಾಪಿ ಒಪಿಡಿಗಳು ಮತ್ತು ತುರ್ತು ಅಲ್ಲದ ಸೇವೆಗಳನ್ನು ಸ್ಥಗಿತಗೊಳಿಸಲು ನೀಡಿದ್ದ ಕರೆಗೆ ಪೂರಕವಾಗಿ ಸ್ಥಾನಿಕ ವೈದ್ಯರು ತಮ್ಮ ಪ್ರತಿಭಟನೆ ದಾಖಲಿಸಿದರು.

‘ನಮಗೆ ನ್ಯಾಯ ಬೇಕು’ ಎಂಬ ಘೋಷಣೆ ಮೊಳಗಿಸಿದ ವೈದ್ಯರು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಮಹಾರಾಷ್ಟ್ರ ವೈದ್ಯರ ಪ್ರತಿಭಟನೆ ಇಂದು

ಅತ್ಯಾಚಾರ–ಕೊಲೆ ಖಂಡಿಸಿ ಮಹಾರಾಷ್ಟ್ರದ ಸ್ಥಾನಿಕ ವೈದ್ಯರು ಮಂಗಳವಾರದಿಂದ ಅನಿರ್ದಿಷ್ಟ ಅವಧಿಯ ಮುಷ್ಕರ ನಡೆಸಲಿದ್ದಾರೆ.

ಮಹಾರಾಷ್ಟ್ರದ ಎಲ್ಲ ಆಸ್ಪತ್ರೆಗಳಲ್ಲಿ ಮಂಗಳವಾರದಿಂದ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಎಲ್ಲ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು ಎಂದು ಮಹಾರಾಷ್ಟ್ರ ರಾಜ್ಯ ಸ್ಥಾನಿಕ ವೈದ್ಯರ ಸಂಘ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.