ನವದೆಹಲಿ: ವೈದ್ಯರು, ಕ್ಯಾನ್ಸರ್ ಪೀಡಿತರು ಮತ್ತು ರೆಸ್ಟೋರೆಂಟ್‌ಗಳ ಗುಂಪೊಂದು ಪರೋಕ್ಷ ಧೂಮಪಾನದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಸಾರ್ವಜನಿಕ ಸ್ಥಳಗಳಿಂದ ಧೂಮಪಾನ ವಲಯಗಳನ್ನು (ಸ್ಮೋಕಿಂಗ್ ಜೋನ್) ತೆಗೆದು ಹಾಕಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದೆ.
2003ರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ (ಕೋಟ್ಪಾ) ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ರೆಸ್ಟೋರೆಂಟ್, ಹೋಟೆಲ್, ವಿಮಾನ ನಿಲ್ದಾಣಗಳಲ್ಲಿ ನಿಗದಿಪಡಿಸಿದ ಜಾಗದಲ್ಲಿ ಧೂಮಪಾನ ಮಾಡಲು ಅನುಮತಿ ನೀಡಲಾಗಿದೆ.
‘ದೇಶವನ್ನು ಶೇಕಡ 100 ರಷ್ಟು ಹೊಗೆ ಮುಕ್ತವನ್ನಾಗಿ ಮಾಡಬೇಕು. ಅಲ್ಲದೆ ಧೂಮಪಾನದಿಂದಾಗಿ ಕೋವಿಡ್–19 ಸೋಂಕು ಹರಡುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಇದಕ್ಕಾಗಿ ಸಾರ್ವಜನಿಕ ಸ್ಥಳಗಳಿಂದ ಧೂಮಪಾನ ವಲಯಗಳನ್ನು ತೆಗೆಯಬೇಕು’ ಎಂದು ‘ನೋ ಸ್ಮೋಕಿಂಗ್ ಡೇ’ ಸಂದರ್ಭದಲ್ಲಿ ಮನವಿ ಮಾಡಲಾಗಿದೆ.
‘ಧೂಮಪಾನದಿಂದ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ. ಧೂಮಪಾನ ಶ್ವಾಸಕೋಶದ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೆ ಇದರಿಂದ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಕೋವಿಡ್ ಸೋಂಕು ದೃಢಪಟ್ಟ ಧೂಮಪಾನಿಗಳಿಗೆ ಸಾವಿನ ಅಪಾಯ ಹೆಚ್ಚಿರುತ್ತದೆ’ ಎಂದು ಟಾಟಾ ಮೆಮೋರಿಯಲ್ ಆಸ್ಪತ್ರೆಯ ಕ್ಯಾನ್ಸರ್ ಸರ್ಜನ್ ಪಂಕಜ್ ಚರ್ತುವೇದಿ ಅವರು ತಿಳಿಸಿದರು.
‘ರೆಸ್ಟೋರೆಂಟ್, ಹೋಟೆಲ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಧೂಮಪಾನ ವಲಯವನ್ನು ರದ್ದುಗೊಳಿಸಬೇಕು. ಪರೋಕ್ಷ ಧೂಮಪಾನದಿಂದಾಗಿ ಧೂಮಪಾನ ಮಾಡದವರ ಜೀವಕ್ಕೂ ಹಾನಿಯುಂಟಾಗುವ ಸಾಧ್ಯತೆಗಳಿವೆ’ ಎಂದು ಅವರು ಹೇಳಿದರು.
ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ತಂಬಾಕು ಸೇವಕರನ್ನು ಹೊಂದಿದೆ. ದೇಶದಲ್ಲಿ ಶೇಕಡ 28.6 ವಯಸ್ಕರು ತಂಬಾಕು ಸೇವನೆ ಮಾಡುತ್ತಾರೆ. ಅಲ್ಲದೆ ಶೇಕಡ 27ರಷ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ತಂಬಾಕು ಸೇವನೆಯೇ ಪ್ರಮುಖ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.