ADVERTISEMENT

ಸುಶಾಂತ್‌ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರಿಗೆ ನಿತ್ಯ ಬೆದರಿಕೆ, ನಿಂದನೆ ಕರೆ

ಪಿಟಿಐ
Published 20 ಆಗಸ್ಟ್ 2020, 14:18 IST
Last Updated 20 ಆಗಸ್ಟ್ 2020, 14:18 IST
ಸುಶಾಂತ್‌ ಸಿಂಗ್‌ ರಜಪೂತ್‌
ಸುಶಾಂತ್‌ ಸಿಂಗ್‌ ರಜಪೂತ್‌    

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ವರದಿಗೆ ಸಹಿ ಹಾಕಿದ್ದ ವೈದ್ಯರಿಗೆ ನಿತ್ಯ ನಿಂದನೆ, ಬೆದರಿಕೆ ಕರೆಗಳು ಬರುತ್ತಿವೆ. ಸಾಮಾಜಿಕ ತಾಣಗಳಲ್ಲಿ ಅವರ ಮೇಲೆ ಆರೋಪಗಳ ಸುರಿಮಳೆಯೇ ಸುರಿಯುತ್ತಿದೆ.

ಸುಶಾಂತ್‌ ಮರಣೋತ್ತರ ಪರೀಕ್ಷೆ ನಡೆದ ಕೂಪರ್ ಆಸ್ಪತ್ರೆಯ ಐವರು ವೈದ್ಯರ ಹೆಸರುಗಳು ಮತ್ತು ಮೊಬೈಲ್ ಸಂಖ್ಯೆಗಳನ್ನುಳ್ಳ ಮರಣೋತ್ತರ ಪರೀಕ್ಷಾ ವರದಿಯ ಸ್ಕ್ರೀನ್-ಶಾಟ್‌ಗಳು ಸದ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಸುಶಾಂತ್‌ ಸಾವಿನ ಸುತ್ತ ಹುಟ್ಟಿಕೊಂಡಿರುವ ಹಲವು ವಾದಗಳಿಗೆ ಇವು ಮತ್ತಷ್ಟು ಪುಷ್ಟಿ ನೀಡುತ್ತಿವೆ.

ತಮಗೆ ಎದುರಾಗಿರುವ ಬೆದರಿಕೆಗಳ ಕುರಿತು ವೈದ್ಯರು ಪ್ರತಿಕ್ರಿಯಿಸಲು ಲಭ್ಯವಾಗಿಲ್ಲ. ಈ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರದ ಮೆಡಿಕೋ-ಲೀಗಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಶೈಲೇಶ್ ಮೊಹಿತೆ, ‘ವೈದ್ಯರಿಗೆ ಕಳೆದ ಕೆಲವು ದಿನಗಳಿಂದ ಬೆದರಿಕೆ, ನಿಂದನೀಯ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ,’ ಎಂದು ಹೇಳಿದ್ದಾರೆ.

ADVERTISEMENT

‘ವೈದ್ಯರು ನಿಜಾಂಶ ಮರೆಮಾಚಲು ಭಾರಿ ಪ್ರಮಾಣದ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗುತ್ತಿದೆ,’ ಎಂದೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಮರಣೋತ್ತರ ಪರೀಕ್ಷಾ ವರದಿಗೆ ಸಹಿ ಹಾಕಿದ ಐದು ವೈದ್ಯರು ಕಿರುಕುಳ ಅನುಭವಿಸುತ್ತಿರುವ ಬಗ್ಗೆ ಕೂಪರ್ ಆಸ್ಪತ್ರೆಯ ಡೀನ್ ಡಾ. ಪಿನಾಕಿನ್ ಗುಜ್ಜರ್ ಅವರು ನನಗೆ ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲ, ಆಸ್ಪತ್ರೆಯ ಲ್ಯಾಂಡ್‌ಲೈನ್‌ ಸಂಖ್ಯೆಗಳಿಗೂ ಬೆದರಿಕೆ ಕರೆಗಳು ನಿತ್ಯ ಬರುತ್ತಿವೆ,’ ಎಂದು ಡಾ. ಮೊಹಿತೆ ಪಿಟಿಐಗೆ ತಿಳಿಸಿದ್ದಾರೆ.

‘ಈ ರೀತಿ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಕೆಲವರು ಮತ್ತಷ್ಟು ಮುಂದೆ ಹೋಗಿ ವೈದ್ಯರ ವೈಯಕ್ತಿಕ ವಿವರಗಳನ್ನು ಕಲೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವೈದ್ಯರು ಈ ರೀತಿಯ ಕಿರುಕುಳ ಅನುಭವಿಸುತ್ತಿರುವುದು ಮತ್ತು ಅವರ ಕುಟುಂಬಗಳ ಮೇಲೆ ದಾಳಿ ನಡೆಯುತ್ತಿರುವುದು ಆತಂಕಕಾರಿ ಸಂಗತಿ,’ ಎಂದು ಮೊಹಿತೆ ಬೇಸರ ವ್ಯಕ್ತಪಡಿಸಿದರು.

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಜೂನ್ 14 ರಂದು ಬಾಂದ್ರಾದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ನಂತರ ಪ್ರಕರಣ ದೇಶದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.