ADVERTISEMENT

ಮಣಿಪುರ ಹೊತ್ತಿ ಉರಿಯುವಾಗ ಸಂಸತ್ತಿನಲ್ಲಿ ಪ್ರಧಾನಿ ನಗೆ ಚಟಾಕಿ: ರಾಹುಲ್ ಆರೋಪ

ಪಿಟಿಐ
Published 11 ಆಗಸ್ಟ್ 2023, 10:40 IST
Last Updated 11 ಆಗಸ್ಟ್ 2023, 10:40 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   (ಪಿಟಿಐ ಚಿತ್ರ)

ನವದೆಹಲಿ: ‘ಮಣಿಪುರ ಕಳೆದ ನಾಲ್ಕು ತಿಂಗಳಿನಿಂದ ಹೊತ್ತಿ ಉರಿಯುತ್ತಿದ್ದರೂ ಸಂಸತ್ತಿನಲ್ಲಿ ನಗುವುದು, ಹಾಸ್ಯಚಟಾಕಿ ಹಾರಿಸುವುದು ಪ್ರಧಾನಿ ಹುದ್ದೆಯ ಘನತೆಗೆ ತಕ್ಕುದಲ್ಲ’ ಎಂದು ಪ್ರಧಾನಿ ಮೋದಿ ಅವರ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ವಾಗ್ದಾಳಿ ನಡೆಸಿದರು.

ಎಐಸಿಸಿ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಣಿಪುರ ಭಸ್ಮವಾಗುವುದನ್ನು ಪ್ರಧಾನಿ ಬಯಸಿದ್ದಾರೆ ಮತ್ತು ಅದಕ್ಕೆ ಅವರು ಅವಕಾಶ ನೀಡಿದ್ದಾರೆ. ನಿಜಕ್ಕೂ ಅಲ್ಲಿ  ಹಿಂಸಾಚಾರ ತಡೆಯಲು ಬಯಸಿದಲ್ಲಿ ಅದಕ್ಕೆ  ಬೇಕಾದ ಎಲ್ಲ ಅಸ್ತ್ರಗಳೂ ಕೇಂದ್ರ ಸರ್ಕಾರದ ಬಳಿ ಇವೆ. ಭಾರತ ಸೇನೆಯನ್ನು ಬಳಸಿಕೊಂಡು ಎರಡೇ ಎರಡು ದಿನಗಳಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಎಲ್ಲ ಅತಿರೇಕಗಳಿಗೆ ಅಂತ್ಯ ಹಾಡಬಹುದು ಎಂದು ಹೇಳಿದರು.

‘ಅಲ್ಲಿ ಮಹಿಳೆಯರು, ಮಕ್ಕಳು ನಿತ್ಯ ಸಾಯುತ್ತಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿವೆ. ಆದರೂ ಸಂಸತ್ತಿನ ಮಧ್ಯದಲ್ಲಿ ಕುಳಿತು ಪ್ರಧಾನಿ ನಗುತ್ತಾರೆ. ಇದು ರಾಹುಲ್‌ ಗಾಂಧಿ,  ಕಾಂಗ್ರೆಸ್ ಅಥವಾ ವಿರೋಧ ಪಕ್ಷಗಳ ಕುರಿತ ವಿಚಾರ ಅಲ್ಲ. ಭಾರತದ ಕುರಿತ ವಿಚಾರ. ಬಿಜೆಪಿಯ ಒಡೆದು ಆಳುವ ಮತ್ತು ಸುಡುವ ರಾಜಕಾರಣದಿಂದಾಗಿ  ರಾಜ್ಯವನ್ನು ಅಸ್ತಿತ್ವವೇ ಇಲ್ಲದಂತೆ ಸರ್ವನಾಶ ಮಾಡಲಾಗಿದೆ’ ಎಂದು ಕಿಡಿಕಾರಿದರು.

ADVERTISEMENT

‘ಅವಿಶ್ವಾಸದ ನಿರ್ಣಯ ಮೇಲೆ ಎರಡು ತಾಸು ಮಾತನಾಡಿದ ಪ್ರಧಾನಿ ಮೋದಿ ನಕ್ಕಿದ್ದು, ಹಾಸ್ಯ ಚಟಾಕಿ ಹಾರಿಸಿದ್ದು, ಘೋಷಣೆ ಕೂಗಿದ್ದು ನೋಡಿದೆ. ಮಣಿಪುರ ಕಳೆದ ನಾಲ್ಕು ತಿಂಗಳಿನಿಂದ ಹೊತ್ತಿ ಉರಿಯುತ್ತಿದೆ ಎಂಬುದನ್ನು ಅವರು ಮರೆತಂತಿದೆ. ಒಂದೆಡೆ ಹಿಂಸಾಚಾರ ತಾಂಡವವಾಡುತ್ತಿರುವಾಗ ಎರಡು ತಾಸು ಹಾಸ್ಯ ಮಾಡುವುದು ಪ್ರಧಾನಿ ಹುದ್ದೆಗೆ ತಕ್ಕುದಲ್ಲ’ ಎಂದು ಚಾಟಿ ಬೀಸಿದರು.

‘ಮಣಿಪುರದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಹಬಾಳ್ವೆಯ ಭಾರತ ಪರಿಕಲ್ಪನೆಯನ್ನು ಬಿಜೆಪಿ ಕಗ್ಗೊಲೆ ಮಾಡಿದೆ. ಇದೇ ಕಾರಣಕ್ಕೆ ಲೋಕಸಭೆಯಲ್ಲಿ ಭಾರತ ಮಾತೆಯ ಹತ್ಯೆಗೈಯಲಾಗಿದೆ ಎಂದು ಹೇಳಿದ್ದು.  ಇದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.