ನವದೆಹಲಿ(ಪಿಟಿಐ): ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹13,500 ಕೋಟಿ ವಂಚನೆ ಎಸಗಿದ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಅವರು ಆಂಟಿಗುವಾ ಮತ್ತು ಬಾರ್ಬುಡಾದಿಂದ ಅಕ್ರಮವಾಗಿ ದೇಶ ಪ್ರವೇಶಿಸಿದ್ದಾರೆ ಎಂಬ ಕುರಿತ ಪ್ರಕರಣಗಳನ್ನು ಡೊಮಿನಿಕಾ ಸರ್ಕಾರ ಕೈಬಿಟ್ಟಿದೆ.
ಅಕ್ರಮವಾಗಿ ದೇಶ ಪ್ರವೇಶಿಸಿದ್ದಾರೆ ಎಂಬ ಚೋಕ್ಸಿ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಡೊಮಿನಿಕಾ ಸರ್ಕಾರವು ಮೇ 20ರಂದು ಕೈಬಿಟ್ಟಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಆಂಟಿಗುವಾ ಮತ್ತು ಬಾರ್ಬುಡಾದಿಂದ ನಾಪತ್ತೆಯಾಗಿದ್ದ ಚೋಕ್ಸಿ ಅವರನ್ನು ಮೇ ತಿಂಗಳಲ್ಲಿ ಡೊಮಿನಿಕಾ ಪೊಲೀಸರು ಅಕ್ರಮವಾಗಿ ದೇಶ ನುಸುಳಿದ ಆರೋಪದ ಮೇರೆಗೆ ವಶಕ್ಕೆ ಪಡೆದಿದ್ದರು. 51 ದಿನಗಳ ಬಳಿಕ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದರು.ಈ ಹಂತದಲ್ಲಿ ಚೋಕ್ಸಿ ಅವರನ್ನು ಖಾಸಗಿ ಜೆಟ್ ಮೂಲಕ ಭಾರತಕ್ಕೆ ಕರೆತರಲು ಸಿಬಿಐ ತಂಡ ಮುಂದಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.
ಆಂಟಿಗುವಾ ಪ್ರಜೆಯಾದ ಚೋಕ್ಸಿ ಅವರನ್ನು ಭಾರತೀಯರಂತೆ ಕಂಡುಬಂದ ವ್ಯಕ್ತಿಗಳು ಅಪಹರಿಸಿ, ಡೊಮಿನಿಕಾಗೆ ಕರೆತಂದಿದ್ದರು ಎಂದು ಚೋಕ್ಸಿ ವಕೀಲರು ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.