ನವದೆಹಲಿ: ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಏನಾದರೂ ಮಾಡಬೇಕು ಎಂದಾದರೆ ನಾನದಕ್ಕೆ ಸಿದ್ಧ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ– ಪಾಕ್ ಉದ್ವಿಗ್ನತೆಗೆ ಕಾರಣವಾದ ಕಾಶ್ಮೀರ ವಿವಾದವು ಸಾವಿರಾರು ಜನರ ಜೀವನವನ್ನು ಹಾಳುಮಾಡಿದೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಏನಾದರೂ ಮಾಡಬೇಕೆಂದರೆ ಅದಕ್ಕೆ ನಾನು ಸಿದ್ಧ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆಗೂ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ. ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಿಸುವ ನಿಟ್ಟಿನಲ್ಲಿ ಅವರು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿದ್ದಾರೆ. ತಾಲಿಬಾನ್ ಜತೆ ಅಮೆರಿಕ ನಡೆಸುತ್ತಿರುವ ಶಾಂತಿ ಒಪ್ಪಂದದ ವಿಚಾರವನ್ನೂ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದೇನೆ. ಅದಕ್ಕೆ ಭಾರತದ ಬೆಂಬಲವೂ ಬೇಕು’ ಎಂದು ಹೇಳಿದರು.
ಕಾಶ್ಮೀರ ವಿಚಾರದಲ್ಲಿ ಮೂರನೆಯವರ ಹಸ್ತಕ್ಷೇಪವನ್ನು ಭಾರತ ಹಿಂದಿನಿಂದಲೂ ತಿರಸ್ಕರಿಸುತ್ತಲೇ ಬಂದಿದೆ. ಹಾಗೂ ಈ ನಿಲುವಿಗೆ ಬದ್ಧವಾಗಿರುವುದಾಗಿ ಇತ್ತೀಚೆಗಷ್ಟೇ ಪುನರುಚ್ಚರಿಸಿದೆ.
ವಾಣಿಜ್ಯ ಸಂಬಂಧಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ, ‘ಭಾರತವು ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ’ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ. ಅಲ್ಲದೆ, ‘ಈ ವಿಚಾರದಲ್ಲಿ ಭಾರತವು ಅಮೆರಿಕವನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.