ADVERTISEMENT

ಟ್ರಂಪ್‌ ಭೇಟಿ: ಕೊಳೆಗೇರಿ ತೆರವಿಗೆ ಸೂಚನೆ

45 ಕುಟುಂಬಗಳಿಗೆ ಅಹಮದಾಬಾದ್‌ ಮಹಾನಗರ ಪಾಲಿಕೆ ನೋಟಿಸ್‌

ಪಿಟಿಐ
Published 18 ಫೆಬ್ರುವರಿ 2020, 20:00 IST
Last Updated 18 ಫೆಬ್ರುವರಿ 2020, 20:00 IST
ಗೋಡೆಗಳ ಮೇಲೆ ಡೊನಾಲ್ಡ್‌ ಟ್ರಂಪ್‌ ಮತ್ತು ನರೇಂದ್ರ ಮೋದಿ ಚಿತ್ರ ಬರೆಯುತ್ತಿರುವ ಕಲಾವಿದ
ಗೋಡೆಗಳ ಮೇಲೆ ಡೊನಾಲ್ಡ್‌ ಟ್ರಂಪ್‌ ಮತ್ತು ನರೇಂದ್ರ ಮೋದಿ ಚಿತ್ರ ಬರೆಯುತ್ತಿರುವ ಕಲಾವಿದ   

ಅಹಮದಾಬಾದ್‌: ಇಲ್ಲಿ ನಿರ್ಮಾಣಗೊಂಡಿರುವ ಮೊಟೆರಾ ಕ್ರೀಡಾಂಗಣ ಸಮೀಪ ಇರುವ ಕೊಳೆಗೇರಿಯ 45 ಕುಟುಂಬಗಳಿಗೆ ನೋಟಿಸ್‌ ನೀಡಿದ್ದು, ಒಂದು ವಾರದಲ್ಲಿ ಖಾಲಿ ಮಾಡುವಂತೆ ಸೂಚಿಸಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 24ರಂದು ಈ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ.

ಟ್ರಂಪ್‌ ಭೇಟಿಗೂ, ಕೊಳೆಗೇರಿಯ ಕುಟುಂಬಗಳನ್ನು ತೆರವುಗೊಳಿಸುವುದಕ್ಕೂ ಸಂಬಂಧವಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ಪಾಲಿಕೆ ಜಾಗವನ್ನು ಅತಿಕ್ರಮಿಸಿಕೊಂಡಿದ್ದೀರಿ. 7 ದಿನಗಳಲ್ಲಿ ಜಾಗ ಖಾಲಿಮಾಡಬೇಕು. ಇಲ್ಲದಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ತೆರಳುವ ಮಾರ್ಗದಲ್ಲಿ ಈ ಕೊಳೆಗೇರಿ ಪ್ರದೇಶವಿದ್ದು, ಮೊಟೆರಾ ಕ್ರೀಡಾಂಗಣದಿಂದ ಒಂದೂವರೆ ಕಿಲೋ ಮೀಟರ್‌ ದೂರದಲ್ಲಿದೆ. ಪಾಲಿಕೆ ಅಧಿಕಾರಿಗಳು ಕಳೆದ ಒಂದು ವಾರದಿಂದ ಪ್ರತಿನಿತ್ಯ ಪದೇ ಪದೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

‘ಬೀದಿಗೆ ಬದುಕು’
‘ದಶಕದಿಂದ ನಾವು ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಇದುವರೆಗೆ ನಮಗೆ ನೋಟಿಸ್‌ ನೀಡಿರಲಿಲ್ಲ. ಈಗ ದಿಢೀರನೆ ನೋಟಿಸ್‌ ನೀಡಿದ್ದಾರೆ. ನಮಗೆ ಯಾವುದೇ ರೀತಿಯ ಪರ್ಯಾಯ ಜಾಗವಿಲ್ಲ. ಇಲ್ಲಿಂದ ಜಾಗ ಖಾಲಿ ಮಾಡಿಸಿದರೆ ಬೀದಿಯಲ್ಲಿ ಬದುಕಬೇಕಾಗುತ್ತದೆ. ಮಹಿಳೆಯರು, ಮಕ್ಕಳ ಪಾಡು ಏನಾಗಬೇಕು’ ಎಂದು ಕೊಳೆಗೇರಿ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.