ನವದೆಹಲಿ: ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವಾಗಲು ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಮಾರಿದ್ದಾರೆ ಉತ್ತರಪ್ರದೇಶದ ಬರೇಲಿಯಲ್ಲಿರುವ ಖಾಸಗಿಶಾಲೆಯೊಂದರ ಪ್ರಾಂಶುಪಾಲೆ ಕಿರಣ್ ಝಗ್ವಾಲ್.
ಹುತಾತ್ಮ ಯೋಧನ ಹೆಂಡತಿ ಅಳುತ್ತಿರುವುದನ್ನು ನೋಡಿದಾಗ ಆಕೆಗೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಯೋಚಿಸಿದೆ. ಕೈಯಲ್ಲಿ ಅಪ್ಪ ಉಡುಗೊರೆ ಕೊಟ್ಟ ಚಿನ್ನದ ಬಳೆ ಇತ್ತು. ಅದನ್ನು ಮಾರಿ ಸಿಕ್ಕಿದ ₹1,38,387 ಹಣವನ್ನು ಪುಲ್ವಾಮ ಹುತಾತ್ಮರ ಕುಟುಂಬದ ನೆರವಿಗಾಗಿ ನಾನು ಪ್ರಧಾನಿಯವರ ಪರಿಹಾರ ನಿಧಿಗೆ ನೀಡಿದ್ದೇನೆ ಎಂದು ಕಿರಣ್ ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಮ್ಮ ದೇಶದ ಜನಸಂಖ್ಯೆ130 ಕೋಟಿ ಇದೆ. ಪ್ರತಿಯೊಬ್ಬ ಪ್ರಜೆಯೂ ₹1 ನೆರವು ನೀಡಿದರೂ ದೊಡ್ಡ ಮೊತ್ತ ಸಂಗ್ರಹವಾಗುತ್ತದೆ.ಹುತಾತ್ಮ ಯೋಧರ ಕುಟುಂಬಕ್ಕೆ ಸಹಾಯ ಮಾಡಲು ಎಲ್ಲರೂ ಮುಂದೆ ಬರಬೇಕು ಎಂದು ಕಿರಣ್ ಮನವಿ ಮಾಡಿದ್ದಾರೆ.
ಸಿಆರ್‌ಪಿಎಫ್ ಹುತಾತ್ಮ ಯೋಧರ ಕುಟುಂಬಕ್ಕೆ 6 ಲಕ್ಷ ನೀಡಿದ ಭಿಕ್ಷುಕಿ
ಅಜ್ಮೇರ್: ಕಳೆದ ವರ್ಷ ಸಾವಿಗೀಡಾಗಿದ್ದ ರಾಜಸ್ಥಾನದ ಭಿಕ್ಷುಕಿಯೊಬ್ಬರ ಉಳಿತಾಯದ ಹಣವನ್ನು ಪುಲ್ವಾಮ ಹುತಾತ್ಮರ ಕುಟುಂಬಕ್ಕೆ ನೀಡಲಾಗಿದೆ.
ಅಜ್ಮೇರ್ ನ ದೇವಾಲಯವೊಂದರ ಹೊರಗೆ ಭಿಕ್ಷೆ ಬೇಡುತ್ತಿದ್ದ ನಂದಿನಿ ಶರ್ಮಾ ಎಂಬಾಕೆ ಸಾಯುವ ಮುನ್ನ ತನ್ನ ಉಳಿತಾಯದ ಹಣವನ್ನು ದೇವಸ್ಥಾನದ ಟ್ರಸ್ಟಿಗಳಿಗೊಪ್ಪಿಸಿದ್ದರು.ತಾನು ಮರಣ ಹೊಂದಿದ ಮೇಲೆ ಆ ಹಣವನ್ನು ಉತ್ತಮ ಕಾರ್ಯಕ್ಕಾಗಿ ಬಳಸಿ ಎಂದು ಆಕೆ ಹೇಳಿದ್ದಳು.
ಹೀಗಿರುವಾಗ ನಂದಿನಿ ಶರ್ಮಾಳ ಉಳಿತಾಯದ ಹಣವಾದ ₹6.61 ಲಕ್ಷವನ್ನು ದೇವಾಲಯದ ಟ್ರಸ್ಟಿಗಳು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡುವ ಮೂಲಕ ಆಕೆಯ ಕೊನೆಯ ಇಚ್ಛೆ ಪೂರೈಸಿದ್ದಾರೆ.
ಜಿಲ್ಲಾಧಿಕಾರಿಗೆ ಬ್ಯಾಂಕ್ ಡ್ರಾಫ್ಟ್ ಹಸ್ತಾಂತರಿಸಿದ ದೇವಾಲಯದ ಟ್ರಸ್ಟಿ ಸಂದೀಪ್ ಗೌರ್, ನಂದಿನಿ ಶರ್ಮಾ ಅವರ ಸಂಪಾದನೆಯ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡುವ ಮೂಲಕ ಸಿಆರ್‌ಪಿಎಫ್ ಹುತಾತ್ಮ ಯೋಧರಿಗೆ ನೆರವು ನೀಡುತ್ತಿದ್ದೇವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.