ನವದೆಹಲಿ: ‘2021–22ರ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ದೊರೆತ ದೇಣಿಗೆಯ ಪ್ರಮಾಣವು ಶೇ 31.50ರಷ್ಟು (₹ 187.03 ಕೋಟಿ) ಹೆಚ್ಚಳವಾಗಿದೆ’ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯ ವರದಿ ಹೇಳಿದೆ.
‘2021–22ರ ದೇಣಿಗೆಯ ವಿವರಗಳನ್ನು (₹ 20,000ಕ್ಕೂ ಮೇಲ್ಪಟ್ಟ ಮೊತ್ತ) ರಾಷ್ಟ್ರೀಯ ಪಕ್ಷಗಳು ಘೋಷಿಸಿದ್ದು, 7,141 ದೇಣಿಗಾರರಿಂದ ₹ 780.774 ಕೋಟಿ ಸಂಗ್ರಹವಾಗಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.
‘ಬಿಜೆಪಿಯು 4,957 ಮಂದಿಯಿಂದ ₹ 614.63 ಕೋಟಿ ದೇಣಿಗೆಯನ್ನು, ಕಾಂಗ್ರೆಸ್ 1,255 ಮಂದಿಯಿಂದ ₹ 95.46 ಕೋಟಿ ದೇಣಿಗೆಯನ್ನು ಸ್ವೀಕರಿಸಿರುವುದಾಗಿ ಆ ಪಕ್ಷಗಳು ಘೋಷಿಸಿವೆ’ ಎಂದು ವರದಿ ಹೇಳಿದೆ.
‘ಬಿಜೆಪಿ ಘೋಷಿಸಿದ ದೇಣಿಗೆಯ ಮೊತ್ತವು ಕಾಂಗ್ರೆಸ್, ಎನ್‌ಸಿಪಿ, ಸಿಪಿಐ, ಸಿಪಿಎಂ, ಎನ್‌ಪಿಇಪಿ ಮತ್ತು ಎಐಟಿಸಿ ಪಕ್ಷಗಳು ಘೋಷಿಸಿದ ಒಟ್ಟು ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು. ಇದೇ ವೇಳೆ, ಬಹುಜನ ಸಮಾಜ ಪಕ್ಷವು ಕಳೆದ 16 ವರ್ಷಗಳಿಂದ ಘೋಷಿಸುತ್ತಿರುವಂತೆ ಈ ಬಾರಿಯೂ ₹ 20,000ಕ್ಕೆ ಮೇಲ್ಪಟ್ಟು ಯಾವುದೇ ದೇಣಿಗೆ ಸ್ವೀಕರಿಸಿಲ್ಲ ಎಂದು ಹೇಳಿದೆ’ ಎಂದೂ ವರದಿ ವಿವರಿಸಿದೆ.
‘2020–21ರಲ್ಲಿ ಬಿಜೆಪಿಗೆ ಸಂದಾಯವಾದ ದೇಣಿಗೆ ಪ್ರಮಾಣವು ₹ 477.55 ಕೋಟಿ. 2021–22ರಲ್ಲಿ ಈ ಪ್ರಮಾಣ ಶೇ 28.71ರಷ್ಟು ಹೆಚ್ಚಾಗಿದೆ. ಆದರೆ 2019–20ಕ್ಕೆ ಹೋಲಿಸಿದರೆ ಈ ಬಾರಿ ದೇಣಿಗೆಯ ಪ್ರಮಾಣವು ಶೇ 41.49ರಷ್ಟು ಇಳಿಕೆಯಾಗಿದೆ.’
‘ಅದೇ ರೀತಿ, ಕಾಂಗ್ರೆಸ್ ಪಕ್ಷಕ್ಕೆ ದೊರೆತ ದೇಣಿಗೆಯು ₹ 74.52 ಕೋಟಿ. 2021–22ರ ದೇಣಿಗೆ ಪ್ರಮಾಣ ಶೇ 28.09ರಷ್ಟು ಹೆಚ್ಚಾಗಿದೆ. 2019–20ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್‌ಗೆ ದೊರತ ದೇಣಿಗೆ ಪ್ರಮಾಣವು ಶೇ 46.39ರಷ್ಟು ಇಳಿಕೆಯಾಗಿದೆ.’
‘ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಸಿಪಿಎಂ ಸಂಗ್ರಹಿಸಿರುವ ದೇಣಿಗೆಯಲ್ಲಿ ಶೇ.22.06ರಷ್ಟು (₹ 2.85 ಕೋಟಿ) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ ಸಂಗ್ರಹ ಮಾಡಿರುವ ದೇಣಿಗೆಯಲ್ಲಿ ಶೇ 40.50ರಷ್ಟು (₹ 24.10 ಲಕ್ಷ) ಇಳಿಕೆಯಾಗಿದೆ’ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.