ಮಾಲೆಗಾಂವ್: ಮುಂಬೈ ಕುರಿತ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ. ಮುಂಬೈನ ಬೆಳವಣಿಗೆಗೆ ಮರಾಠಿಗರು ನೀಡಿದ ಕೊಡುಗೆಯನ್ನು ಎಂದಿಗೂ ಕಡೆಗಣಿಸಲಾಗುವುದಿಲ್ಲ. ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಅವರು ತಮ್ಮ ಹೇಳಿಕೆಗಳ ಮೂಲಕ ಯಾರಿಗೂ ನೋವುಂಟು ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಶನಿವಾರ ಹೇಳಿದ್ದಾರೆ.
ಮುಂಬೈನ ಪಶ್ಚಿಮ ಉಪನಗರ ಅಂಧೇರಿಯಲ್ಲಿ ವೃತ್ತವೊಂದಕ್ಕೆ ನಾಮಕರಣ ಮಾಡುವ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ರಾಜ್ಯಪಾಲ ಕೋಶಿಯಾರಿ, ‘ನಾನು ಇಲ್ಲಿನ ಜನರಿಗೆ ಹೇಳಬಯಸುತ್ತೇನೆ. ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ, ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ಹೊರಹಾಕಿದರೆ ನಿಮ್ಮ ಬಳಿ ಹಣವಿರುವುದಿಲ್ಲ. ಮುಂಬೈ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲ’ ಎಂದು ಹೇಳಿದ್ದರು.
ತಮ್ಮ ಹೇಳಿಕೆ ವಿವಾದಕ್ಕೆ ತಿರುಗುತ್ತಲೇ ರಾಜ್ಯಪಾಲರು ಶನಿವಾರ ಸ್ಪಷ್ಟನೆ ನೀಡಿದ್ದು, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ‘ಮರಾಠಿ ಮಾತನಾಡುವ ಜನರ ಶ್ರಮವನ್ನು ತುಚ್ಛೀಕರಿಸುವ ಉದ್ದೇಶ ನನಗಿಲ್ಲ’ ಎಂದಿದ್ದಾರೆ.
ನಾಸಿಕ್‌ನ ಮಾಲೆಗಾಂವ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಶಿಂದೆ, ‘ಮುಂಬೈ ಕುರಿತ ಕೋಶಿಯಾರಿ ಅವರ ದೃಷ್ಟಿಕೋನವನ್ನು ನಾವು ಒಪ್ಪುವುದಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ಈಗ ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ಅವರು ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವವರು. ಅವರ ಕಾರ್ಯಗಳ ಬಗ್ಗೆ ಎಚ್ಚರ ವಹಿಸಬೇಕು. ಇತರರನ್ನು ಅವಮಾನಿಸಬಾರದು. ಮರಾಠಿ ಸಮುದಾಯದ ಶ್ರಮವು ಮುಂಬೈನ ಅಭಿವೃದ್ಧಿ ಮತ್ತು ಪ್ರಗತಿಗೆ ಕೊಡುಗೆ ನೀಡಿದೆ. ಮುಂಬೈ ಅಪಾರ ಸಾಮರ್ಥ್ಯ ಹೊಂದಿರುವ ಪ್ರಮುಖ ನಗರ. ದೇಶದಾದ್ಯಂತದ ಜನರು ಇದನ್ನು ತಮ್ಮ ಮನೆ ಎಂದುಕೊಂಡಿದ್ದಾರೆ. ಮರಾಠಿಗರು ತಮ್ಮ ಗುರುತು ಮತ್ತು ಘನತೆಯನ್ನು ಉಳಿಸಿಕೊಂಡಿದ್ದಾರೆ. ಅದನ್ನು ಅಪಮಾನಿಸಬಾರದು‘ ಎಂದು ಶಿಂದೆ ಹೇಳಿದ್ದಾರೆ.
‘ಮುಂಬೈಯನ್ನು ಮಹಾರಾಷ್ಟ್ರದ ರಾಜಧಾನಿಯನ್ನಾಗಿ ಮಾಡಲು 105 ಜನರು ಆಂದೋಲನದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಮುಂಬೈನ ಮರಾಠಿ ಅಸ್ಮಿತೆ ಕಾಪಾಡುವಲ್ಲಿ ಶಿವಸೇನಾ ಸಂಸ್ಥಾಪಕ ದಿವಂಗತ ಬಾಳ ಠಾಕ್ರೆ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಶಿಂದೆ ಅಭಿಪ್ರಾಯಪಟ್ಟರು.
‘ಮುಂಬೈ ಮತ್ತು ಮರಾಠಿ ಜನರನ್ನು ಯಾರೂ ಅವಮಾನಿಸಲು ಸಾಧ್ಯವಿಲ್ಲ. ಅನೇಕ ವಿಪತ್ತುಗಳನ್ನು ಎದುರಿಸಿಯೂ, ಮುಂಬೈ ಗಟ್ಟಿಯಾಗಿ ನಿಂತಿದೆ. ಈ ನಗರ ನಿರಂತರವಾಗಿ ದುಡಿಯುತ್ತದೆ. ಸಾವಿರಾರು ಜನರಿಗೆ ಉದ್ಯೋಗ, ಜೀವನೋಪಾಯವನ್ನು ನೀಡಿದೆ’ ಎಂದು ಶಿಂದೆ ಮುಂಬೈಯನ್ನು ಕೊಂಡಾಡಿದರು.
ಈ ಮಧ್ಯೆ, ಧುಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ‘ಮಹಾರಾಷ್ಟ್ರದ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಮರಾಠಿಗರು ಸಿಂಹಪಾಲು ಹೊಂದಿದ್ದಾರೆ. ಕೈಗಾರಿಕಾ ವಲಯದಲ್ಲಿಯೂ ಮರಾಠಿಗರು ಜಾಗತಿಕ ಮಟ್ಟದಲ್ಲಿ ದಾಪುಗಾಲು ಹಾಕಿದ್ದಾರೆ. ರಾಜ್ಯಪಾಲರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ’ ಎಂದಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.