ADVERTISEMENT

ವಂಚಕರನ್ನು ನಂಬಬೇಡಿ, ಇಸ್ರೇಲಿಗಳಂತೆ ದೇಶಪ್ರೇಮಿಗಳಾಗಿ: ಮಧ್ಯಪ್ರದೇಶ CM ಯಾದವ್

ಪಿಟಿಐ
Published 14 ಆಗಸ್ಟ್ 2024, 14:02 IST
Last Updated 14 ಆಗಸ್ಟ್ 2024, 14:02 IST
<div class="paragraphs"><p>ಮೋಹನ ಯಾದವ್</p></div>

ಮೋಹನ ಯಾದವ್

   

ಭೋಪಾಲ್: ‘ತಮ್ಮ ನೆಲವನ್ನು ಮರಳಿ ಪಡೆಯಲು ಇಸ್ರೇಲಿಗಳು 2 ಸಾವಿರ ವರ್ಷ ಕಾಯಬೇಕಾಯಿತು. ಆದರೂ ವರ್ಷಕ್ಕೊಮ್ಮೆ ಸೇರಿ ದೇಶಕ್ಕಾಗಿ ದುಡಿಯುವ ಪ್ರತಿಜ್ಞೆ ಮಾಡುವ ಅವರ ಪರಿ ಭಾರತೀಯರಿಗೂ ಮಾದರಿ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ್ ಬುಧವಾರ ಹೇಳಿದ್ದಾರೆ.

ದೇಶ ವಿಭಜನೆ ನೆನಪಿನಲ್ಲಿ ‘ಪಾರ್ಟಿಷನ್‌ ಹಾರಾರ್ಸ್‌’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಇಸ್ರೇಲಿಗಳು ತಮ್ಮ ಮಾತೃಭೂಮಿಯನ್ನು ಮರಳಿಪಡೆಯಲು ಎರಡು ಸಾವಿರ ವರ್ಷಗಳ ಕಾಲ ಹೋರಾಡಿದ್ದಾರೆ. ಆದರೆ ಅಷ್ಟು ವರ್ಷಗಳ ಕಾಲ ಅವರು ದೇಶಪ್ರೇಮವನ್ನು ಕಾಪಿಟ್ಟುಕೊಂಡಿದ್ದರು. ಜಗತ್ತಿನ ಹಲವೆಡೆ ಇಸ್ರೇಲಿಗಳು ಹರಿದು ಹಂಚಿಹೋಗಿದ್ದಾರೆ. ಆದರೆ ಅವರೆಲ್ಲರೂ ವರ್ಷಕ್ಕೊಮ್ಮೆ ಒಂದೆಡೆ ಸೇರಿ, ‘ಮುಂದಿನ ವರ್ಷ ನಮ್ಮ ಸ್ವಂತ ನೆಲದಲ್ಲಿ ಸೇರೋಣ’ ಎಂದು ಪ್ರತಿಜ್ಞೆ ಸ್ವೀಕರಿಸುತ್ತಾರೆ. ಆದರೆ ದುರದೃಷ್ಟವೆಂದರೆ, ಇಸ್ರೇಲಿಗಳು ಇದಕ್ಕಾಗಿ ಎರಡು ಸಾವಿರ ವರ್ಷಗಳನ್ನೇ ಕಾಯಬೇಕಾಯಿತು’ ಎಂದು ಯಾದವ್ ಅಭಿಪ್ರಾಯಪಟ್ಟಿದ್ದಾರೆ.

‘12ನೇ ಶತಮಾನದಲ್ಲಿ ಆಕ್ರಮಣಕಾರರಿಗೆ ಪೃಥ್ವಿರಾಜ್ ಚವ್ಹಾಣ್ 17 ಬಾರಿ ಕ್ಷಮಾಪಣೆ ನೀಡಿದ್ದರು. ಆದರೆ ಆಕ್ರಮಣಕಾರರು ಸಿಕ್ಕ ಮತ್ತೊಂದು ಅವಕಾಶವನ್ನು ಕೈಚೆಲ್ಲಲಿಲ್ಲ. ಯಾರನ್ನೇ ಆದರೂ ಸುಲಭವಾಗಿ ನಂಬುವುದು ಭಾರತೀಯರ ಗುಣ. ಆದರೆ ಚಾಣಾಕ್ಷ ಜನರು ಕುತಂತ್ರದಿಂದ ನಮ್ಮನ್ನು ವಂಚಿಸುತ್ತಿದ್ದಾರೆ. ಹೀಗಾಗಿ ಇತಿಹಾಸದಿಂದ ನಾವು ಪಾಠ ಕಲಿಯಬೇಕಿದೆ’ ಎಂದಿದ್ದಾರೆ.

‘ಬ್ರಿಟಿಷರು ಭಾರತಕ್ಕೆ ವ್ಯಾಪಾರಕ್ಕೆ ಬಂದವರು. ತಮ್ಮದೇ ಸೇನೆ ಕಟ್ಟಿಕೊಂಡರು. 1857ರ ನಂತರ ಒಡೆದು ಆಳುವ ನೀತಿಯನ್ನು ಅನುಸರಿಸಿದರು. ನಂತರ ಒಂದೊಂದೇ ರಾಜ್ಯವನ್ನು ತಮ್ಮ ಕೈವಶ ಮಾಡಿಕೊಂಡರು. ತಮ್ಮ ಲಾಭಕ್ಕೆ ಹಿಂದೂ ಮತ್ತು ಮುಸ್ಲಿಮರ ನಡುವೆ ಕಂದಕ ಸೃಷ್ಟಿಸಲು ಯತ್ನಿಸಿದರು. ಆದರೆ 1906ರವರೆಗೂ ಅವರ ಈ ತಂತ್ರ ಕೈಗೂಡಿರಲಿಲ್ಲ. ಮುಸ್ಲಿಂ ಲೀಗ್ ಚುನಾವಣೆಯಲ್ಲಿ ಸ್ಪರ್ಧಿಸಿತು. ದೇಶಪ್ರೇಮಿ ಮುಸ್ಲಿಮರು ಬ್ರಿಟಿಷರ ಈ ತಂತ್ರ ಕೈಗೂಡಲು ಬಿಡಲಿಲ್ಲ. ಆದರೆ ಭಾರತೀಯ ಕಾಂಗ್ರೆಸ್‌ ತನ್ನ ರಾಜಕೀಯ ದಾಳವನ್ನು ಬದಲಿಸಿತು. ಇದರ ಪರಿಣಾಮ ಮುಸ್ಲೀಂ ಲೀಗ್‌ನ ವಿಭಜನೆಯ ತಂತ್ರಕ್ಕೆ ನಾಂದಿಯಾಯಿತು. ಇದರ ಪರಿಣಾಮ ದೇಶ ವಿಭಜನೆಗೊಂಡಿತು’ ಎಂದಿದ್ದಾರೆ.

‘ದೇಶ ವಿಭಜನೆಯು ಭಾರತದ ಪಾಲಿಗೆ ಅತ್ಯಂತ ಕರಾಳ ದಿನ. ಇದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ಈ ವಿಭಜನೆ ಕುರಿತು ಮಾತನಾಡಲು ಜನರೂ ಇಷ್ಟಪಡುವುದಿಲ್ಲ. ದೇಶ ಬೆಳೆಯಬೇಕೆಂದರೆ ಹಾಗೂ ಮುಂದುವರಿಯಬೇಕೆಂದರೆ, ಇತಿಹಾಸ ಕಲಿಸಿದ ಪಾಠವನ್ನು ಪುನರಾವಲೋಕನ ಮಾಡುವುದು ಉತ್ತಮ. ಈ ಎಲ್ಲಾ ಉದಾಹರಣೆಗಳನ್ನು ನೀಡಿದ ಉದ್ದೇಶವೇ ಸ್ವಾತಂತ್ರ್ಯದ ಮಹತ್ವವನ್ನು ಅರಿಯುವ ಸಲುವಾಗಿ’ ಎಂದು ಮುಖ್ಯಮಂತ್ರಿ ಮೋಹನ ಯಾದವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.