ಶಿವಪುರಿ (ಮಧ್ಯಪ್ರದೇಶ): ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಕಳಪೆ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ದೂಷಿಸಬಾರದು ಎಂದು ಬಿಜೆಪಿ ನಾಯಕಿ, ಮಾಜಿ ಕೇಂದ್ರ ಸಚಿವೆ ಉಮಾಭಾರತಿ ಹೇಳಿದ್ದಾರೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತರ ಪ್ರದೇಶದ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ದೂರುವುದು ಸರಿಯಲ್ಲ. 1992 ಡಿಸೆಂಬರ್ 6ರಂದು ಬಾಬರಿ ಮಸೀದಿ ಕೆಡವಿದ ನಂತರವೂ ಬಿಜೆಪಿ ಸೋತಿತ್ತು. ಆದರೂ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳಿಸುವ ಕಾರ್ಯಸೂಚಿಯನ್ನು ನಾವು ಕೈಬಿಡಲಿಲ್ಲ. ನಾವು ಎಂದಿಗೂ ಅಯೋಧ್ಯೆಯನ್ನು ಮತಗಳೊಂದಿಗೆ ಸಂಯೋಜಿಸುವುದಿಲ್ಲ’ ಎಂದು ತಿಳಿಸಿದ್ದಾರೆ.
‘ಉತ್ತರ ಪ್ರದೇಶದ ಫಲಿತಾಂಶವು ಭಗವಾನ್ ರಾಮನ ಮೇಲೆ ಜನರ ಭಕ್ತಿ ಕಡಿಮೆಯಾಗಿದೆ ಎಂದರ್ಥವಲ್ಲ. ಪ್ರತಿಯೊಬ್ಬ ರಾಮ ಭಕ್ತನು ಬಿಜೆಪಿಗೆ ಮತ ಹಾಕುತ್ತಾನೆ ಎಂಬ ದುರಹಂಕಾರ ನಮಗಿಲ್ಲ. ನಮಗೆ ಮತ ಹಾಕದೆ ಇರುವವರು ರಾಮ ಭಕ್ತರಲ್ಲ ಎಂದು ನಾವು ಭಾವಿಸುವುದಿಲ್ಲ. ಕೆಲವು ನಿರ್ಲಕ್ಷ್ಯಗಳಿಂದಾಗಿ ಈ ಫಲಿತಾಂಶ ದೊರೆತಿದೆಯೇ ಹೊರತು, ಬೇರೇನಿಲ್ಲ’ ಎಂದು ಉಮಾಭಾರತಿ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುವುದು ಕಷ್ಟವೇನಿಲ್ಲ ಎಂದು ಅವರು ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಕೇವಲ 33 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.