ADVERTISEMENT

ನನ್ನ ಬಂಧನಕ್ಕಾಗಿ ಬಿಜೆಪಿಯನ್ನು ದ್ವೇಷಿಸಬೇಡಿ: ಕಾರ್ಯಕರ್ತರಿಗೆ ಕೇಜ್ರಿವಾಲ್ ಕರೆ

ಏಜೆನ್ಸೀಸ್
Published 23 ಮಾರ್ಚ್ 2024, 7:42 IST
Last Updated 23 ಮಾರ್ಚ್ 2024, 7:42 IST
   

ನವದೆಹಲಿ: ‘ಯಾವುದೇ ಜೈಲಿನಲ್ಲಿ ನನ್ನನ್ನು ದೀರ್ಘಕಾಲ ಇಡಲು ಸಾಧ್ಯವಿಲ್ಲ. ನನ್ನ ಭರವಸೆಗಳನ್ನು ಉಳಿಸಿಕೊಳ್ಳಲು ಶೀಘ್ರದಲ್ಲಿಯೇ ಹಿಂತಿರುಗುತ್ತೇನೆ’ ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶನಿವಾರ ಸಂದೇಶ ಕಳುಹಿಸಿದ್ದಾರೆ.

ಜಾರಿ ನಿರ್ದೇಶನಾಲಯದ ವಶದಲ್ಲಿರುವ ಅವರು ಕಳುಹಿಸಿರುವ ಸಂದೇಶವನ್ನು ಅವರ ಪತ್ನಿ ಸುನಿತಾ ಕೇಜ್ರಿವಾಲ್‌ ಶನಿವಾರ ಓದಿದರು. ಅದರ ವಿಡಿಯೊವನ್ನು ಎಎಪಿ ಹಂಚಿಕೊಂಡಿದೆ.

‘ನಿಮ್ಮ ಮಗ ಮತ್ತು ಸಹೋದರ ಕೇಜ್ರಿವಾಲ್‌ ಅವರು ಕಸ್ಟಡಿಯಿಂದ ಇದನ್ನು ಕಳುಹಿಸಿದ್ದಾರೆ’ ಎಂದರು.

ADVERTISEMENT

‘ನನ್ನ ಪ್ರೀತಿಯ ದೇಶವಾಸಿಗಳೇ ನಾನು ಜೈಲಿನಲ್ಲಿದ್ದರೂ ಹೊರಗಿದ್ದರೂ ದೇಶಕ್ಕಾಗಿ ಸೇವೆ ಮುಂದುವರಿಸುತ್ತೇನೆ. ನನ್ನ ಇಡೀ ಜೀವನ ದೇಶಕ್ಕೆ ಮುಡಿಪು. ರಕ್ತದ ಪ್ರತಿ ಹನಿಯೂ ದೇಶಕ್ಕೆ ಸಮರ್ಪಿತ. ನಾನು ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ ಮತ್ತು ಅದು ಮುಂದುವರಿಯುತ್ತದೆ ಎಂಬುದು ಗೊತ್ತಿದೆ. ಈ ಬಂಧನ ಆಶ್ಚರ್ಯ ತಂದಿಲ್ಲ’ ಎಂದು ಅವರು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

 ‘ನಾನು ಇಲ್ಲಿಯವರೆಗೆ ನೀಡಿರುವ ಯಾವುದೇ ಭರವಸೆಯನ್ನು ಈಡೇರಿಸುವಲ್ಲಿ ವಿಫಲನಾಗಿಲ್ಲ’ ಎಂದಿರುವ ಅವರು ‘ಬಜೆಟ್‌ನಲ್ಲಿ ಘೋಷಿಸಿರುವಂತೆ ಅರ್ಹ ಫಲಾನುಭವಿ ಮಹಿಳೆಯರಿಗೆ ಮಾಸಿಕ ₹ 1000 ಗೌರವಧನ ನೀಡುವ ಯೋಜನೆ ಜಾರಿಗೊಳಿಸುವುದಾಗಿ’ ಭರವಸೆ ನೀಡಿದ್ದಾರೆ.

‘ನನ್ನ ಬಂಧನಕ್ಕಾಗಿ ಬಿಜೆಪಿಯನ್ನು ದ್ವೇಷಿಸಬೇಡಿ. ಅವರೂ ನಮ್ಮ ಸಹೋದರ ಸಹೋದರಿಯರು‘ ಎಂದು ಹೇಳಿದ್ದಾರೆ. ತಾನು ಕಬ್ಬಿಣದಷ್ಟು ಬಲಶಾಲಿಯಾದ ವ್ಯಕ್ತಿ ಎಂದು ಹೇಳಿರುವ ಅವರು ಜನರಿಗೆ ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುವಂತೆ ಕೋರಿದ್ದಾರೆ. 

ಬಿಜೆಪಿ ಟೀಕೆ: ಬಂಧನದಲ್ಲಿದ್ದರೂ ಅರವಿಂದ ಕೇಜ್ರಿವಾಲ್‌ ಅವರು ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರಿದಿರುವುದನ್ನು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಕಟುವಾಗಿ ಟೀಕಿಸಿದ್ದಾರೆ. ‘ಇದು ದೇಶದ ರಾಜಕೀಯ ಪ್ರಯಾಣದಲ್ಲಿ ಅತ್ಯಂತ ದುರದೃಷ್ಟಕರ ಕ್ಷಣ ಮತ್ತು ಅತಿ ಕೆಟ್ಟ ರೀತಿಯ ರಾಜಕೀಯ’ ಎಂದು ಅವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.