ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ಸ್ವಾತಂತ್ರ್ಯ, ಭಾರತ- ಪಾಕಿಸ್ತಾನ ಸಂಬಂಧ, ಕಾಶ್ಮೀರ, ಭಾರತ–ಅಮೆರಿಕ ವಾಣಿಜ್ಯ ವ್ಯವಹಾರ ಹಾಗೂ ಸೇನಾ ಒಪ್ಪಂದ ವಿಚಾರಗಳ ಬಗ್ಗೆ ಮಂಗಳವಾರ ಮಾತುಕತೆ ನಡೆಸಿದ್ದಾರೆ.
ಮಾತುಕತೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಟ್ರಂಪ್ ಈ ವಿಚಾರವನ್ನು ತಿಳಿಸಿದರು.
‘ನಾವು ಧಾರ್ಮಿಕ ಸ್ವಾತಂತ್ರ್ಯದ ವಿಚಾರವಾಗಿ ಚರ್ಚಿಸಿದ್ದೇವೆ. ಜನರಿಗೆ ಧಾರ್ಮಿಕ ಸ್ವಾತಂತ್ರ್ಯ ಇರಬೇಕು ಎಂದು ಮೋದಿ ಬಯಸಿದ್ದಾರೆ. ಈ ನಿಟ್ಟಿನಲ್ಲಿ ಭಾರತವು ಹಿಂದೆಯೂ ಸಾಕಷ್ಟು ಶ್ರಮ ವಹಿಸಿದ್ದನ್ನು ಕಾಣಬಹುದು. ಮೋದಿ ಒಬ್ಬ ಧಾರ್ಮಿಕ ಮತ್ತು ಶಾಂತ ಸ್ವಭಾವದ ಕಠಿಣ ವ್ಯಕ್ತಿ. ಭಯೋತ್ಪಾದನೆ ನಿಗ್ರಹವೇ ಅವರ ಆದ್ಯತೆಯಾಗಿದೆ. ಅವರು ಅದನ್ನು ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.
ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸುತ್ತಾ, ‘ಭಾರತ– ಪಾಕ್ ಉದ್ವಿಗ್ನತೆಗೆ ಕಾರಣವಾದ ಈ ವಿವಾದವು ಸಾವಿ ರಾರು ಜನರ ಬದುಕಿಗೆ ಮುಳ್ಳಾಗಿದೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಏನಾ ದರೂ ಮಾಡಬೇಕೆಂದರೆ ಅದಕ್ಕೆ ನಾನು ಸಿದ್ಧ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜೊತೆಗೂ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ. ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಿಸುವ ನಿಟ್ಟಿನಲ್ಲಿ ಅವರು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿದ್ದಾರೆ. ತಾಲಿಬಾನ್ ಜತೆ ಅಮೆರಿಕ ನಡೆಸುತ್ತಿರುವ ಶಾಂತಿ ಒಪ್ಪಂದದ ವಿಚಾರವನ್ನೂ ಮೋದಿಗೆ ತಿಳಿಸಿದ್ದೇನೆ. ಅದಕ್ಕೆ ಭಾರತದ ಬೆಂಬಲವೂ ಬೇಕು’ ಎಂದರು.
ವಾಣಿಜ್ಯ ಸಂಬಂಧಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ, ‘ಭಾರತವು ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ’ ಎಂದು ಪುನರುಚ್ಚರಿಸಿ, ‘ಈ ವಿಚಾರದಲ್ಲಿ ಭಾರತವು ಅಮೆರಿಕವನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕು’ ಎಂದರು.
ರಕ್ಷಣಾ ಒಪ್ಪಂದಕ್ಕೆ ಸಹಿ
- ಶಸ್ತ್ರಾಸ್ತ್ರ ಸರಬರಾಜಿಗೆ ಸಂಬಂಧಿಸಿದಂತೆ ಮೂರು ಒಪ್ಪಂದಗಳಿಗೆ ಸಹಿ
- ಭಾರತೀಯ ಸೇನೆಗೆ 30 ಹೆಲಿಕಾಪ್ಟರ್ ಪೂರೈಸುವ ಸುಮಾರು ₹ 15,000 ಕೋಟಿ ಮೌಲ್ಯದ ಒಪ್ಪಂದ
- ಒಪ್ಪಂದದಡಿ ನೌಕಾಪಡೆಗೆ ‘ಎಂಎಚ್–60ಆರ್’ ಶ್ರೇಣಿಯ 24 ಯುದ್ಧ ಹೆಲಿಕಾಪ್ಟರ್‌ಗಳು ಹಾಗೂ 6 ಅಪಾಚೆ ಹೆಲಿಕಾಪ್ಟರ್‌ಗಳು ಸರಬರಾಜಾಗಲಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.