ಕೋಲ್ಕತ್ತ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಸಹ ಗೆಲ್ಲುವುದು ಅನುಮಾನ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯದಲ್ಲಿ ಕಾಂಗ್ರೆಸ್ ಜತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮೈತ್ರಿ ಮಾಡಿಕೊಳ್ಳುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದರು. ಇದರಿಂದಾಗಿ 'ಇಂಡಿಯಾ' ಮೈತ್ರಿಕೂಟದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು.
'ಬಿಜೆಪಿಗೆ ಪ್ರಮುಖ ಎದುರಾಳಿಯಾಗಬಲ್ಲ 300 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಬೇಕೆಂದು ನಾನು ಪ್ರಸ್ತಾಪವನ್ನು ಮುಂದಿಟ್ಟಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಲು ನಿರಾಕರಿಸಿದರು. ಈಗ ಮುಸ್ಲಿಂ ಮತದಾರರ ಮೇಲೆ ಪ್ರಭಾವ ಬೀರಲು ರಾಜ್ಯಕ್ಕೆ ಬಂದಿದ್ದಾರೆ. ಅವರು (ಕಾಂಗ್ರೆಸ್) 300 ಸ್ಥಾನಗಳಲ್ಲಿ ಸ್ಪರ್ಧಿಸಿದರೆ ಕನಿಷ್ಠ 40 ಸ್ಥಾನ ಸಿಗಬಹುದೇ ಎಂಬುದರ ಬಗ್ಗೆ ನನಗೆ ಅನುಮಾನವಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮಗೆ ಸಾಧ್ಯವಾದರೆ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಹಿಂದಿ ಭಾಷೆ ಪ್ರಾಬಲ್ಯದ ಉತ್ತರ ಭಾರತದಲ್ಲಿ ಬಿಜೆಪಿಯನ್ನು ಸೋಲಿಸಿ ಎಂದು ಕಾಂಗ್ರೆಸ್‌ಗೆ ಮಮತಾ ಸವಾಲು ಹಾಕಿದ್ದಾರೆ.
'ರಾಜ್ಯದಲ್ಲಿ ಮೈತ್ರಿಗೆ ನಾವು ಸನ್ನದ್ದರಾಗಿದ್ದೆವು. ಎರಡು ಸ್ಥಾನಗಳನ್ನು ನೀಡುವುದಾಗಿ ಹೇಳಿದ್ದೆವು. ಆದರೆ ಕಾಂಗ್ರೆಸ್ ನಿರಾಕರಿಸಿದೆ. ಈಗ ಎಲ್ಲ 42 ಸ್ಥಾನಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿ. ಆ ಬಳಿಕ ಮೈತ್ರಿ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ನಾವು ಏಕಾಂಗಿಯಾಗಿ ಹೋರಾಡಿ ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ' ಎಂದು ಹೇಳಿದ್ದಾರೆ.
ಬಂಗಾಳದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ 'ಭಾರತ ಜೋಡೊ ನ್ಯಾಯ ಯಾತ್ರೆ'ಯ ಬಗ್ಗೆಯೂ ಮಮತಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೀಟು ಹಂಚಿಕೆ ಇತ್ಯರ್ಥ್ಯಗೊಳಿಸಲಾಗುವುದು: ರಾಹುಲ್
ಏತನ್ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟನ್ನು ಇತ್ಯರ್ಥಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ಇಂಡಿಯಾ' ಮೈತ್ರಿಕೂಟದಿಂದ ಹೊರಬಂದಿದ್ದೇವೆ ಎಂದು ಮಮತಾ ಹೇಳಿಲ್ಲ. ಕಾಂಗ್ರೆಸ್ ಕೂಡ ಹೇಳಿಲ್ಲ. ಮಮತಾ ಮೈತ್ರಿಕೂಟದಲ್ಲೇ ಇದ್ದಾರೆ. ಸೀಟು ಹಂಚಿಕೆ ಮಾತುಕತೆಯ ಮೂಲಕ ಬಗೆಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.