ADVERTISEMENT

ಎನ್‌ಪಿಆರ್‌ ಭೀತಿ: ಹಳಿ ತಪ್ಪಲಿದೆ ಗಣತಿ?

ಗೃಹಸಚಿವಾಲಯವನ್ನು ಎಚ್ಚರಿಸಿದ ಸ್ಥಾಯಿಸಮಿತಿ

ಶೆಮಿಜ್‌ ಜಾಯ್‌
Published 5 ಮಾರ್ಚ್ 2020, 20:02 IST
Last Updated 5 ಮಾರ್ಚ್ 2020, 20:02 IST
   

ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಬಗ್ಗೆ ಜನರಲ್ಲಿರುವ ಅಸಮಾಧಾನ, ಭೀತಿ ಹಾಗೂ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು 2021ರಲ್ಲಿ ನಡೆಯುವ ಇಡೀ ಜನಗಣತಿ ಪ್ರಕ್ರಿಯೆಯ ದಾರಿತಪ್ಪಿಸಬಹುದು ಎಂದು ಸಂಸದೀಯ ಸ್ಥಾಯಿ ಸಮಿತಿಯು ಕೇಂದ್ರ ಗೃಹಸಚಿವಾಲಯವನ್ನು ಎಚ್ಚರಿಸಿದೆ.

ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ನೇತೃತ್ವದ ಗೃಹ ಖಾತೆಯ ಸ್ಥಾಯಿ ಸಮಿತಿಯು ಈ ಸಂಬಂಧ ಸಚಿವಾಲಯಕ್ಕೆ ಕೆಲವು ಸಲಹೆಗಳನ್ನು ನೀಡಿದೆ. ಎನ್‌ಪಿಆರ್‌ಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಎಲ್ಲ ರಾಜ್ಯಗಳಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಹೀಗೆ ಮಾಡಿದಲ್ಲಿ, ಜನರಲ್ಲಿ ಇರುವ ಗೊಂದಲ ನಿವಾರಣೆಯಾಗಿ, ಇಡೀ ಪ್ರಕ್ರಿಯೆಗೆ ತೊಡಕಿಲ್ಲದೆ ನಡೆಯಲಿದೆ ಎಂದು ಸಮಿತಿ ಹೇಳಿದೆ.

ಸರ್ಕಾರದ ಯೋಜನೆಯಂತೆ, ಏಪ್ರಿಲ್‌ 1ರಿಂದ ಆರಂಭವಾಗಲಿರುವಮನೆಗಣತಿ ಕಾರ್ಯದ ಜತೆಯಲ್ಲೇ ಎನ್‌ಪಿಆರ್‌ ಮಾಹಿತಿ ಸಂಗ್ರಹವೂಆರಂಭ ಆಗಬೇಕಿದೆ. ಆದರೆ, ಬಿಜೆಪಿ ಏತರ ಪಕ್ಷಗಳ ಆಡಳಿತವಿರುವ ಕೇರಳ,ಪಶ್ಚಿಮ ಬಂಗಾಳ ರಾಜ್ಯಗಳ ಸರ್ಕಾರಗಳು, ‘ಎನ್‌ಪಿಆರ್‌ ಅನ್ನು ಎನ್‌ಆರ್‌ಸಿಗೆಆಧಾರವಾಗಿ ಪರಿಗಣಿಸಲಾಗುವುದರಿಂದ ಎನ್‌ಪಿಆರ್‌ ಮಾಹಿತಿ ಸಂಗ್ರಹಿಸುವುದಿಲ್ಲ’ ಎಂದು ಹೇಳಿವೆ.

ADVERTISEMENT

ಗಣತಿಯ ವೇಳೆ ಸಂಗ್ರಹಿಸಬೇಕಾದ ಮಾಹಿತಿಯಲ್ಲಿ ಜನ್ಮ ದಿನಾಂಕ, ಪಾಲಕರ ಜನ್ಮ ಸ್ಥಳ ಮುಂತಾದ ಕೆಲವು ಪ್ರಶ್ನೆಗಳನ್ನು ಸೇರಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರವು, ‘2010ರಲ್ಲಿ ಗಣತಿ ನಡೆಸುವಾಗ ಪಾಲಕರಿಂದ ದೂರವಾಗಿ ಉಳಿದಿದ್ದವರ ಮಾಹಿತಿಯನ್ನು ಸಂಗ್ರಹಿಸಲಾಗಿತ್ತೇ ವಿನಾ ಅವರ ಪಾಲಕರ ಜನ್ಮದಿನಾಂಕ ಮತ್ತು ಜನ್ಮಸ್ಥಳ ಮಾಹಿತಿಯನ್ನು ದಾಖಲಿಸಿರಲಿಲ್ಲ. ದತ್ತಾಂಶ ನಿರ್ವಹಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರ ಜನ್ಮದಿನಾಂಕ ಮತ್ತು ಜನ್ಮಸ್ಥಳದ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಾಗಿರಬೇಕು ಎಂಬ ಉದ್ದೇಶದಿಂದ 2020ರ ಎನ್‌ಪಿಆರ್‌ನಲ್ಲಿ ಆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಗೃಹ ಖಾತೆಯು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಆದರೆ ಗೃಹ ಸಚಿವಾಲಯದ ಉತ್ತರವು ಸಮಿತಿಗೆ ಸಮಾಧಾನ ನೀಡಿಲ್ಲ.ಬದಲಿಗೆ ಆಧಾರ್‌ ದಾಖಲೆಗಳನ್ನೇ ಬಳಕೆ ಮಾಡುವ ಸಾಧ್ಯತೆಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಸಮಿತಿ ಹೇಳಿದೆ.

ಆಧಾರ್ ಮಾಹಿತಿ ಏಕೆ ಬೇಡ?
ಆಧಾರ್ ಸಂಖ್ಯೆಯ ದಾಖಲೆಗಳ ಆಧಾರದಲ್ಲಿ 'ಎನ್‌ಪಿಆರ್‌ ಅನ್ನು ಪರಿಷ್ಕರಿಸಲಾಗುತ್ತಿದೆಯೇ ವಿನಾ ಹೊಸದಾಗಿ ರಚಿಸಲಾಗುತ್ತಿಲ್ಲ. ಆದ್ದರಿಂದ ಆಧಾರ್ ಮಾಹಿತಿಯು ಎನ್‌ಪಿಆರ್‌ ಉದ್ದೇಶವನ್ನು ಈಡೇರಿಸುವುದಿಲ್ಲ. ಪ್ರತಿಯೊಂದು ಮನೆಗೆ ಭೇಟಿನೀಡದ ಹೊರತು, ಕುಟುಂಬದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಿಲ್ಲ' ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.