ನವದೆಹಲಿ: ಗ್ರಾಮೀಣ ಪ್ರದೇಶ ಮತ್ತು ನಗರಗಳಲ್ಲಿ ನೀರಿನ ನಿರ್ವಹಣೆಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಲು ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ ಪ್ರಾಧಿಕಾರ (ಐಡಬ್ಲ್ಯುಆರ್‌ಎಂ) ಸ್ಥಾಪನೆಯನ್ನು ಪ್ರಸ್ತಾಪಿಸುವ ಕರಡು ಮಸೂದೆಯನ್ನು ಎಲ್ಲ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಕುಮಾರ್ ವರ್ಮಾ ಹೇಳಿದ್ದಾರೆ.
‘ವಿಕಸಿತ ಭಾರತದ ಪರಿಕಲ್ಪನೆಯ ಭಾಗವಾಗಿ ಜಲ ಭದ್ರತೆಯನ್ನು ಸಾಧಿಸಲು ಕೇಂದ್ರ ಸರ್ಕಾರವು ರಾಜ್ಯಮಟ್ಟದಲ್ಲಿ ಐಡಬ್ಲ್ಯುಆರ್‌ಎಂ ಸ್ಥಾಪಿಸಲು ಮುಂದಾಗಿದೆ. ಈ ಪ್ರಾಧಿಕಾರವು ನೀರಾವರಿಗೆ ಸಂಬಂಧಿಸಿದ ಇಲಾಖೆಗಳು ಮತ್ತು ಏಜೆನ್ಸಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಲು ನೆರವಾಗಲಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮತ್ತು ತ್ರಿವೇಣಿ ವಾಟರ್ ಇನ್‌ಸ್ಟಿಟ್ಯೂಟ್ ಮಂಗಳವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಿಳಿಸಿದರು.
‘ಪ್ರಾಧಿಕಾರ ಸ್ಥಾಪನೆಗೆ ಸಂಬಂಧಿಸಿದ ಕರಡು ಮಸೂದೆಯನ್ನು ಎಲ್ಲ ರಾಜ್ಯ ಸರ್ಕಾರಗಳ ಜತೆ ಹಂಚಿಕೊಳ್ಳಲಾಗಿದೆ. ಈ ಪ್ರಾಧಿಕಾರವು ಮುಖ್ಯಮಂತ್ರಿಗಳ ನೇತೃತ್ವದ ಐಡಬ್ಲ್ಯುಆರ್‌ಎಂ ಕೌನ್ಸಿಲ್‌ನ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ’ ಎಂದು ಮಾಹಿತಿ ನೀಡಿದರು.
‘ಗ್ರಾಮಗಳಿಂದ ಹಿಡಿದು ನಗರಗಳವರೆಗೆ, ಜಿಲ್ಲಾಮಟ್ಟದಿಂದ ಆರಂಭವಾಗಿ ರಾಜ್ಯಮಟ್ಟದವರೆಗೆ ಜಲ ಭದ್ರತೆಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುವುದು, ಅಂತರ್ಜಲ ನಿರ್ವಹಣೆ ಮತ್ತು ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳ ನಿರ್ವಹಣೆಯ ಕೆಲಸವನ್ನು ಪ್ರಾಧಿಕಾರ ಮಾಡಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.