ತ್ರಿಶೂರ್/ ನಮಕ್ಕಲ್: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿನ ಎಸ್‌ಬಿಐ ಎಟಿಎಂ ಒಡೆದು ₹70 ಲಕ್ಷ ದರೋಡೆ ಮಾಡಿದ ಕಳ್ಳರ ತಂಡವನ್ನು, ತಮಿಳುನಾಡು ಪೊಲೀಸರು ಬೆನ್ನಟ್ಟಿ ಶುಕ್ರವಾರ ಹಿಡಿದಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸರ ಗುಂಡಿಗೆ ಒಬ್ಬ ಮೃತಪಟ್ಟಿದ್ದು, ಆರು ಜನರನ್ನು ವಶಕ್ಕೆ ಪಡೆಯಲಾಗಿದೆ.
‘ಕೇರಳದಲ್ಲಿ ಕೃತ್ಯ ಎಸಗಿದ ಹರಿಯಾಣ ಮೂಲದ ತಂಡ, ಕ್ಯಾಂಟರ್ ಮೂಲಕ ತಮಿಳುನಾಡನ್ನು ಶುಕ್ರವಾರ ಪ್ರವೇಶಿಸಿದ್ದರು. ಕೇರಳದಲ್ಲಿ ಎಟಿಎಂ ದಡೋಡೆ ಸಂದರ್ಭದಲ್ಲಿ ಬಳಸಿದ್ದ ಕಾರನ್ನು, ಟ್ರಕ್‌ನೊಳಗೆ ಬಚ್ಚಿಟ್ಟಿದ್ದರು. ಆ ಮೂಲಕ ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು. ಇದನ್ನು ಪತ್ತೆ ಮಾಡಿದ ಪೊಲೀಸರು ಈ ತಂಡವನ್ನು ಬೆನ್ನಟ್ಟಿದರು. ಈ ಸಂದರ್ಭದಲ್ಲಿ ಈ ತಂಡ ಪೊಲೀಸರ ಮೇಲೆ ದಾಳಿ ಮಾಡಿದೆ. ಆತ್ಮರಕ್ಷಣೆಗಾಗಿ ಆರೋಪಿಗಳತ್ತ ಪೊಲೀಸರು ಗುಂಡು ಹಾರಿಸಿದರು. ಇದರಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಸೇಲಂ ರೇಂಜ್‌ನ ಡಿಐಜಿ ಇ.ಎಸ್. ಉಮಾ ತಿಳಿಸಿದ್ದಾರೆ.
‘ದಡೋಡೆಕೋರರು ಎರಡು ತಂಡಗಳಾಗಿ ಎಟಿಎಂ ದೋಚಿದ್ದರು. ಒಂದು ತಂಡ ಕ್ಯಾಂಟರ್ ಒಳಗಿದ್ದರೆ, ಮತ್ತೊಂದು ಕಾರಿನಲ್ಲಿದ್ದರು. ಕೃತ್ಯದ ನಂತರ ತ್ರಿಶೂರ್ ಪೊಲೀಸರು ನೀಡಿದ ಮಾಹಿತಿ ಆಧರಿಸಿ ತಮಿಳುನಾಡು ಪೊಲೀಸರು ಮಾರ್ಗದುದ್ದಕ್ಕೂ ನಿಗಾ ಇರಿಸಿದ್ದರು. ನಮಕ್ಕಲ್ ಪೊಲೀಸ್ ವರಿಷ್ಠಾಧಿಕಾರಿ ಎಸ್. ರಾಜೇಶ್ ಕಣ್ಣನ್ ಅವರು ಪೊಲೀಸರ ತಂಡ ರಚಿಸಿ, ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದರು. ರಾಜಸ್ಥಾನದ ನಂಬರ್ ಪ್ಲೇಟ್ ಇದ್ದ ಈ ಕ್ಯಾಂಟರ್ ಅನ್ನು ಸಿಗ್ನಲ್ ಬಳಿ ತಡೆಯಲು ಪೊಲೀಸರು ಮುಂದಾದರು. ಆದರೆ ನಿಲ್ಲಿಸದೇ ಮುಂದೆ ಸಾಗಲು ಈ ತಂಡ ಪ್ರಯತ್ನಿಸಿತು. ಈ ಸಂದರ್ಭದಲ್ಲಿ ಕೆಲ ಕಾರು ಹಾಗೂ ಬೈಕ್‌ಗಳಿಗೂ ಡಿಕ್ಕಿಯಾಗಿ ಸುಮಾರು 250 ಮೀಟರ್ ಎಳೆದುಕೊಂಡು ಹೋಯಿತು. ಈ ಹೊತ್ತಿನಲ್ಲಿ ಪೊಲೀಸರು ಕ್ಯಾಂಟರ್ ಸುತ್ತುವರಿದರು’ ಎಂದು ಕಾರ್ಯಾಚರಣೆಯನ್ನು ವಿವರಿಸಿದರು.
‘ಈ ಸಂದರ್ಭದಲ್ಲಿ ಜಮಾಲ್ ಎಂಬಾತ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದ. ಆಗ ಆತ್ಮರಕ್ಷಣೆಗೆ ಪೊಲೀಸರು ಗುಂಡು ಹಾರಿಸಿದರು. ಚಾಲಕ ಹಾಗೂ ಕ್ಯಾಬಿನ್‌ನಲ್ಲಿದ್ದ ಇತರರನ್ನು ಪೊಲೀಸರು ವಶಕ್ಕೆ ಪಡೆದರು. ಬಂಧಿತರಿಂದ ಹಣದ ಚೀಲವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.
‘ತ್ರಿಶೂರ್‌ನಲ್ಲಿನ ಎಸ್‌ಬಿಐ ಎಟಿಎಂನಲ್ಲಿ ಶುಕ್ರವಾರ ನಸುಕಿನ 2ರಿಂದ 4ರ ಅವಧಿಯಲ್ಲಿ ಈ ಕೃತ್ಯ ನಡೆದಿದೆ. ಸಿಸಿಟಿವಿ ಕ್ಯಾಮೆರಾ ನಾಶಗೊಳಿಸಿದ್ದರು. ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ತೆರೆದು, ಹಣ ದೋಚಿದ್ದರು. ಕೃತ್ಯ ನಡೆಯುತ್ತಿದ್ದಂತೆ ಪೊಲೀಸರಿಗೆ ಬಂದ ಎಚ್ಚರಿಕೆಯ ಕರೆ ಆಧರಿಸಿ, ಕೇರಳ ಪೊಲೀಸರು ಕಾರ್ಯಪ್ರವೃತ್ತರಾದರು. ಅಷ್ಟರೊಳಗೆ ದರೋಡೆಕೋರರು ತಮಿಳುನಾಡು ಪ್ರವೇಶಿಸಿದ್ದರು. ಈ ತಂಡವು ಮಪ್ರಾಣಂ, ತ್ರಿಶೂರ್ ಪೂರ್ವ, ಕೊಳಳಿ ಎಟಿಎಂಗಳನ್ನು ಗುರಿಯಾಗಿಸಿಕೊಂಡಿದ್ದರು. ಕೆಲ ವಾರಗಳ ಹಿಂದೆಯೂ ಹರಿಯಾಣ ಮೂಲದ ಇಂಥದ್ದೇ ತಂಡವನ್ನು ಬಂಧಿಸಲಾಗಿತ್ತು’ ಎಂದು ತ್ರಿಶೂರ್ ನಗರ ಪೊಲೀಸ್ ಆಯುಕ್ತ ಆರ್. ಎಲಾಂಗೊ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.