ADVERTISEMENT

ದೇಶದ 15ನೇ ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ತಿಳಿಯಬೇಕಾದ ಪ್ರಮುಖ ವಿಚಾರಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2022, 5:32 IST
Last Updated 22 ಜುಲೈ 2022, 5:32 IST
ದ್ರೌಪತಿ ಮುರ್ಮು
ದ್ರೌಪತಿ ಮುರ್ಮು   

ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದ್ರೌಪತಿ ಮುರ್ಮು ಅವರು ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದವರೊಬ್ಬರು ರಾಷ್ಟ್ರದ ಪರಮೋಚ್ಚ ಸ್ಥಾನವನ್ನು ಅಲಂಕರಿಸಿದಂತಾಗಿದೆ.

ದ್ರೌಪದಿ ಅವರಿಗೆ ರಾಜಕೀಯ ಹೊಸದೇನೂ ಅಲ್ಲ. ರಾಜಕೀಯ ಮತ್ತು ಸಾಂವಿಧಾನಿಕವಾಗಿ ಹಲವು ಸ್ಥಾನಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಒಡಿಶಾದ ಮಯೂರ್‌ಭಂಜ್‌ ಜಿಲ್ಲೆಯವರಾದ ಅವರು ಬಿ.ಎ ಪದವೀಧರೆ. ರಾಜಕೀಯಕ್ಕೆ ಕಾಲಿಡುವುದಕ್ಕೂ ಮುನ್ನ ಅವರು ಶಿಕ್ಷಕಿಯಾಗಿದ್ದರು. 1997ರಲ್ಲಿ ರಾಯರಂಗ್‌ಪುರದಲ್ಲಿ ಕೌನ್ಸಿಲರ್‌ ಆಗಿ ಆಯ್ಕೆಯಾಗುವುದರೊಂದಿಗೆ ರಾಜಕೀಯ ಪಯಣ ಆರಂಭಿಸಿದರು.

ಮುರ್ಮುಗೆ ಭಾರಿ ಜಯ
ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆದಿತ್ತು. ಒಟ್ಟು 4,817 ಲಭ್ಯ ಮತದಾರರಲ್ಲಿ 4,809 ಮತದಾರರು (776 ಸಂಸದರು ಹಾಗೂ 4,033 ವಿಧಾನಸಭೆ ಶಾಸಕರು) ತಮ್ಮ ಹಕ್ಕು ಚಲಾಯಿಸಿದ್ದರು. 8 ಸಂಸದರು ಮತದಾನ ಮಾಡಿರಲಿಲ್ಲ. ಹೀಗಾಗಿ ಶೇ 99.12ರಷ್ಟು ಮತದಾನವಾಗಿತ್ತು.

ಗುರುವಾರ (ಜುಲೈ 21) ನಡೆದ ಮತ ಎಣಿಕೆಯಲ್ಲಿ ಮುರ್ಮು ಅವರು 6,76,803 ಮತಗಳನ್ನು ಪಡೆದರೆ, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಯಶವಂತ ಸಿನ್ಹಾ 3,80,177 ಮತಗಳನ್ನು ಗಳಿಸಿದ್ದಾರೆ. 10 ಗಂಟೆಗಳಿಗೂ ಹೆಚ್ಚುಕಾಲ ನಡೆದ ಮತ ಎಣಿಕೆಯ ಬಳಿಕ ಚುನಾವಣಾಧಿಕಾರಿ ಪಿ.ಸಿ. ಮೋದಿ ಅವರು ಮುರ್ಮು ಅವರ ಗೆಲುವನ್ನು ಪ್ರಕಟಿಸಿದರು.

ನೂತನ ರಾಷ್ಟ್ರಪತಿ ಕುರಿತ ಪ್ರಮುಖ ವಿಚಾರಗಳು
*ಮುರ್ಮು, 1958ರ ಜೂನ್‌ 20ರಂದು ಸಂತಾಲಾ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಅವರು ಸಂತಾಲಿ ಮತ್ತು ಒಡಿಯಾ ಭಾಷೆಗಳಲ್ಲಿ ಅದ್ಭುತವಾಗಿ ಮಾತನಾಡಬಲ್ಲ ವಾಗ್ಮಿ..

* 1997ರಲ್ಲಿ ರಾಜಕೀಯ ಪ್ರವೇಶಿಸುವ ಮುನ್ನ ಮುರ್ಮು ಶಿಕ್ಷಕಿಯಾಗಿದ್ದರು.

*2000ನೇ ಇಸವಿಯಲ್ಲಿ ಮಯೂರ್‌ಭಂಜ್‌ ಜಿಲ್ಲೆಯ ರಾಯರಂಗ್‌ಪುರದಲ್ಲಿ ಬಿಜೆಪಿ ಟಿಕೆಟ್‌ ಪಡೆದು ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು. 2009ರಲ್ಲಿ ಮತ್ತೊಮ್ಮೆ ವಿಧಾನಸಭೆಗೆ ಪ್ರವೇಶಿಸಿದ್ದರು.

* 2000ರಿಂದ 2002ರ ಅವಧಿಯಲ್ಲಿ ಬಿಜೆಪಿ ಮತ್ತು ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ ವಾಣಿಜ್ಯ ಮತ್ತು ಸಾರಿಗೆ ಸಚಿವರಾಗಿ, 2002ರಿಂದ 2004 ಅವಧಿಯಲ್ಲಿ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

* ಒಡಿಶಾ ಬಿಜೆಪಿಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷೆಯಾಗಿ, ಮಯೂರ್‌ಭಂಜ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

* ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾಗಿ 2015ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು.ಇದರೊಂದಿಗೆ ರಾಜ್ಯಪಾಲರಾಗಿ ನೇಮಕಗೊಂಡ ಒಡಿಶಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಮತ್ತು ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿ ಎಂಬ ಕೀರ್ತಿಯೂ ಅವರದ್ದಾಗಿದೆ. ಅಲ್ಲದೆ, ಜಾರ್ಖಂಡ್‌ನ ರಾಜ್ಯಪಾಲರಾಗಿ ಪೂರ್ಣಾವಧಿ ಸೇವೆ ಸಲ್ಲಿಸಿದ ಮೊದಲಿಗರೂ ಇವರೇ ಎಂಬುದು ವಿಶೇಷ.

* ಮುರ್ಮು ಅವರು 2009ರಿಂದ 2015ರ ಸಮಯದಲ್ಲಿ ವೈಯಕ್ತಿಕವಾಗಿ ಅತ್ಯಂತ ಕಠಿಣ ಸಂದರ್ಭಗಳನ್ನು ಎದುರಿಸಿದ್ದಾರೆ. ಈ ಅವಧಿಯಲ್ಲಿ ಪತಿ ಶ್ಯಾಮ್‌ ಚರಣ್‌ ಮುರ್ಮು ಹಾಗೂ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಸಹೋದರ ಮತ್ತು ತಾಯಿಯೂ ಇದೇ ಸಮಯದಲ್ಲಿ ಮೃತಪಟ್ಟಿದ್ದಾರೆ.

* ಮುರ್ಮು ಅವರ ಪುತ್ರಿ ಒಡಿಶಾದ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

* 13ನೇ ರಾಷ್ಟ್ರಪತಿಯಾಗಿದ್ದ ಪ್ರಣಭ್‌ ಮುಖರ್ಜಿ ಅವರ ಅವಧಿ ಮುಕ್ತಾಯವಾದ(2017ರಲ್ಲಿ) ಸಂದರ್ಭದಲ್ಲಿಯೂ, ಆ ಸ್ಥಾನಕ್ಕೆಮುರ್ಮು ಅವರ ಹೆಸರು ಕೇಳಿ ಬಂದಿತ್ತು. ಆದರೆ ಎನ್‌ಡಿಎ ಕೊನೇ ಕ್ಷಣದಲ್ಲಿ ತನ್ನ ಅಭ್ಯರ್ಥಿಯಾಗಿ ರಾಮನಾಥ್‌ ಕೋವಿಂದ್‌ ಅವರನ್ನು ಆಯ್ಕೆ ಮಾಡಿತ್ತು.

*ರಾಷ್ಟ್ರಪತಿ ಸ್ಥಾನಕ್ಕೆಬುಟ್ಟಕಟ್ಟು ಸಮುದಾಯದಿಂದ ಆಯ್ಕೆಯಾದ ಮೊದಲಿಗರು ದ್ರೌಪದಿ. ಅಷ್ಟೇಅಲ್ಲ ಈ ಸ್ಥಾನ ಅಲಂಕರಿಸುತ್ತಿರುವ ಎರಡನೇ ಮಹಿಳೆಯೂ ಹೌದು. ಇವರಿಗೂ ಮುನ್ನ ಪ್ರತಿಭಾ ಪಟೇಲ್‌ ಅವರು ದೇಶದ 12ನೇ ಹಾಗೂ ಮೊದಲ ಮಹಿಳಾ ರಾಷ್ಟ್ರಪತಿಯಾಗಿ 2012–2017ರ ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.