ಚೆನ್ನೈ: ‘ಹಿಂದಿ ಮಾಸ’ ಕಾರ್ಯಕ್ರಮದಲ್ಲಿ ನಾಡಗೀತೆ ಹಾಡುವ ವೇಳೆ ‘ದ್ರಾವಿಡ’ ಪದವನ್ನು ಕೈಬಿಟ್ಟಿರುವ ವಿಚಾರವು ಭಾರಿ ವಿವಾದಕ್ಕೆ ಕಾರಣವಾಗಿದ್ದು, ರಾಜ್ಯಪಾಲರು ಮತ್ತು ತಮಿಳುನಾಡು ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಿದೆ.
‘ಚೆನ್ನೈ ದೂರದರ್ಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಗೀತೆ ಹಾಡುವಾಗ ದ್ರಾವಿಡ ಕುರಿತ ಸಾಲುಗಳನ್ನು ಕೈಬಿಡುವ ಮೂಲಕ ತಮಿಳು ಭಾಷೆಗೆ ಅವಮಾನ ಮಾಡಲಾಗಿದೆ’ ಎಂದಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜ್ಯಪಾಲ ಆರ್.ಎನ್.ರವಿ ಅವರನ್ನು ಕೂಡಲೇ ವಾಪಸು ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ನಾಡಗೀತೆಯನ್ನು ತಮಿಳಿನ ಪ್ರಖ್ಯಾತ ಕವಿ ಮನೋನ್ಮನಿಯಮ್ ಸುಂದರನಾರ್ ಪಿಳ್ಳೈ ರಚಿಸಿದ್ದಾರೆ.
‘ಈ ವಿಷಯ ಕುರಿತು ಮುಖ್ಯಮಂತ್ರಿ ಹೇಳಿಕೆಗಳು ಕ್ಷುಲ್ಲಕ ಹಾಗೂ ಜನಾಂಗೀಯ ನಿಂದನೆ ಮಾಡುವಂತಿವೆ’ ಎಂದು ರಾಜ್ಯಪಾಲ ಆರ್.ಎನ್.ರವಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ತಮ್ಮ ವಿರುದ್ಧ ತಪ್ಪು ಆಪಾದನೆ ಹೊರಿಸಲಾಗಿದೆ. ಇಂತಹ ಹೇಳಿಕೆಗಳು ಮುಖ್ಯಮಂತ್ರಿಯಂತಹ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಕುಗ್ಗಿಸುತ್ತವೆ’ ಎಂದಿದ್ದಾರೆ.
ಇನ್ನೊಂದೆಡೆ, ಈ ಕುರಿತು ಹೇಳಿಕೆ ನೀಡಿರುವ ರಾಜಭವನ,‘ಆಹ್ವಾನದ ಮೇರೆಗೆ ರಾಜ್ಯಪಾಲರು ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಷ್ಟೆ. ನಾಡಗೀತೆ ಹಾಡುವಲ್ಲಿನ ಈ ವೈಫಲ್ಯದಲ್ಲಿ ಅವರ ಪಾತ್ರ ಇಲ್ಲ’ ಎಂದು ಹೇಳಿದೆ.
‘ನಾಡಗೀತೆಯಿಂದ ನಿರ್ದಿಷ್ಟ ಸಾಲುಗಳನ್ನು ಹಾಡದೇ ಇರುವುದನ್ನು ಒಪ್ಪಲಾಗದು’ ಎಂದು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ, ಬಿಜೆಪಿಯ ಮಿತ್ರ ಪಿಎಂಕೆ ನಾಯಕ ಎಸ್.ರಾಮದಾಸ್, ಕಾಂಗ್ರೆಸ್‌ನ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಹಾಗೂ ಇತರ ನಾಯಕರು ಹೇಳಿದ್ದಾರೆ.
ದೂರದರ್ಶನದಿಂದ ಕ್ಷಮೆ ಯಾಚನೆ: ಈ ವಿಚಾರವು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಚೆನ್ನೈ ದೂರದರ್ಶನ ಕ್ಷಮೆ ಯಾಚಿಸಿ, ಹೇಳಿಕೆ ಬಿಡುಗಡೆ ಮಾಡಿದೆ.
‘ನಾಡಗೀತೆ ಹಾಡುವ ವೇಳೆ ಉಂಟಾದ ಗೊಂದಲದಿಂದಾಗಿ ಆಕಸ್ಮಿಕವಾಗಿ ಈ ಸಾಲುಗಳನ್ನು ಹಾಡಿಲ್ಲ. ಗಾಯಕರಿಗೆ ತಮಿಳು ಭಾಷೆ ಅಥವಾ ನಾಡಗೀತೆಗೆ ಅವಮಾನಿಸುವ ಉದ್ದೇಶವಿರಲಿಲ್ಲ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.