ಚೆನ್ನೈ: ದ್ರಾವಿಡ ಎಂಬುದು ಸಂಸ್ಕೃತ ಪದ. ಆದಿ ಶಂಕರಾಚಾರ್ಯರು ಮೊದಲ ಬಾರಿಗೆ ಅದನ್ನು ಬಳಸಿದ್ದರು. ಆರ್ಯನ್ ಎಂಬುದು ಬ್ರಿಟಿಷರು ಬಳಸಿದ ಪದ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಅಷ್ಟಕ್ಕೂ, ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿ ಇಂಥ ಅಭಿಪ್ರಾಯವೊಂದನ್ನು ಹಂಚಿಕೊಳ್ಳಲು ಕಾರಣವೇನು? ಹಿನ್ನೆಲೆ ಏನು?
ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ಅವರು ಸೃಷ್ಟಿ ಮಾಡಿರುವ ವಿವಾದದ ಹಿನ್ನೆಲೆಯಲ್ಲಿ ಸ್ವಾಮಿ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ. ಅಂದಹಾಗೆ, ಸುಬ್ರಮಣಿಯನ್ ಸ್ವಾಮಿ ಅವರು ರವಿ ಅವರ ಬೆಂಬಲಕ್ಕೂ ನಿಂತಿದ್ದಾರೆ.
ಏನಿದು ರಾಜ್ಯಪಾಲ ರವಿ ವಿವಾದ?
‘ದುರದೃಷ್ಟವಶಾತ್, ತಮಿಳುನಾಡಿನಲ್ಲಿ ಪ್ರತಿಗಾಮಿ ರಾಜಕಾರಣವಿದೆ. ನಾವು ದ್ರಾವಿಡರು ಮತ್ತು ಇದಕ್ಕೂ (ಭಾರತಕ್ಕೂ) ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಮಿಳುನಾಡಿನಲ್ಲಿ ಭಾವಿಸಲಾಗಿದೆ’ ಎಂದು ರಾಜ್ಯಪಾಲ ರವಿ ಬುಧವಾರ ರಾಜಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
‘ತಮಿಳುನಾಡು ರಾಷ್ಟ್ರದ ಆತ್ಮ, ಹೆಗ್ಗುರುತು. ರಾಜ್ಯದಲ್ಲಿ ಪ್ರಚಲಿತದಲ್ಲಿರುವ ಕೆಲವು ಸುಳ್ಳು ಮತ್ತು ನಕಾರಾತ್ಮಕ ಧೋರಣೆಯನ್ನು ಅಳಿಸಲು ನಾವು ಈ ಅಂಶಗಳನ್ನು ಜೀವಂತವಾಗಿಡಬೇಕು. ತಮಿಳುನಾಡು ಭಾರತದ ಅವಿಭಾಜ್ಯ ಅಂಗವಲ್ಲ ಎಂದು ಪ್ರತಿಪಾದಿಸುತ್ತಾ, ಎಲ್ಲವನ್ನೂ ಕುರುಡಾಗಿ ನಿರಾಕರಿಸಲಾಗುತ್ತಿದೆ. ಇದರಲ್ಲಿ ಶಿಕ್ಷಣ ತಜ್ಞರೂ ಸೇರಿಕೊಂಡಿದ್ದಾರೆ. ತಮಿಳುನಾಡಿಗೆ ‘ತಮಿಳಗಂ’ ಎಂಬುದಷ್ಟೇ ಸೂಕ್ತ ಹೆಸರು. ‘ನಾಡು’ ಎಂದರೆ ದೇಶ ಎಂದರ್ಥ. ‘ತಮಿಳುನಾಡು’ ಎಂಬ ಹೆಸರು ಭಾರತದ ಭಾಗವಾಗಿರುವ ಪ್ರದೇಶದ ಸ್ವಾಯತ್ತತೆಯನ್ನು ಸೂಚಿಸುತ್ತದೆ ಎಂದಿದ್ದಾರೆ. ತಮಿಳುನಾಡು ಭಾರತದ ಅವಿಭಾಜ್ಯ ಅಂಗವಲ್ಲ ಎಂಬ ಕಲ್ಪನೆಯನ್ನು ಬಲವಾಗಿ ಬಿತ್ತಲು 50 ವರ್ಷಗಳಿಂದ ಪ್ರಯತ್ನಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ರಾಜಭವನದಿಂದಲೇ ಬಿಡುಗಡೆಯಾದ ಪತ್ರಿಕಾ ಹೇಳಿಕೆಯಲ್ಲಿ ಹೀಗೆ ಉಲ್ಲೇಖವಾಗಿದೆ.
ರಾಜ್ಯಪಾಲರ ಈ ಹೇಳಿಕೆ ತಮಿಳುನಾಡಿನಲ್ಲಿ ವಿವಾದ ಸೃಷ್ಟಿ ಮಾಡಿದೆ. ತಮಿಳುನಾಡಿನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಡಿಎಂಕೆ ನಾಯಕರಂತೂ ರಾಜ್ಯಪಾಲರನ್ನು ತೀವ್ರ ಟೀಕೆಗೆ ಗುರಿಪಡಿಸಿದ್ದಾರೆ. ಹೀಗಾಗಿ, ರವಿ ಸದ್ಯ ವಿವಾದದ ಕೇಂದ್ರಬಿಂದು.
ಬೆಂಬಲಕ್ಕೆ ಬಂದ ಸ್ವಾಮಿ
‘ತಮಿಳುನಾಡು ಎಂಬುದು ತಮಿಳು ಮಾತೃಭಾಷೆಯ ಜನರ ರಾಜ್ಯವಲ್ಲ ಎಂದು ಸ್ಪಷ್ಟಪಡಿಸಿದ್ದಕ್ಕಾಗಿ ನಾನು ರಾಜ್ಯಪಾಲರನ್ನು ಬೆಂಬಲಿಸುತ್ತೇನೆ. ಏಕೆಂದರೆ ಎಲ್ಲಾ ಭಾರತೀಯರು ಬಹುತೇಕ ಒಂದೇ ರೀತಿಯ ಡಿಎನ್‌ಎ ಹೊಂದಿದ್ದೇವೆ ಎಂಬುದು ದೇಶದ ನಾಗರಿಕರ ಡಿಎನ್‌ಎ ವಿಶ್ಲೇಷಣೆಯಿಂದ ಗೊತ್ತಾಗಿದೆ. ದ್ರಾವಿಡ ಎಂಬುದು ಆದಿ ಶಂಕರರಿಂದ ಮೊದಲಬಾರಿಗೆ ಬಳಸಲ್ಪಟ್ಟ ಸಂಸ್ಕೃತ ಪದವಾಗಿದೆ. ಆರ್ಯನ್ ಎಂಬುದು ಬ್ರಿಟಿಷರು ಹೇರಿದ ಪದ’ ಎಂದು ಅವರು ಹೇಳಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.