ADVERTISEMENT

ಬಡ್ತಿಗಾಗಿ ಸರ್ಕಾರವನ್ನು ನಂಬುವ ವೈದ್ಯರು, ಮಾತುಕತೆಗೆ ನಂಬುತ್ತಿಲ್ಲ: ಬಂಗಾಳ ಸಚಿವ

ಪಿಟಿಐ
Published 16 ಸೆಪ್ಟೆಂಬರ್ 2024, 11:44 IST
Last Updated 16 ಸೆಪ್ಟೆಂಬರ್ 2024, 11:44 IST
<div class="paragraphs"><p>ಕೋಲ್ಕತ್ತದಲ್ಲಿ ಕಿರಿಯ ವೈದ್ಯರ ಪ್ರತಿಭಟನೆ</p></div>

ಕೋಲ್ಕತ್ತದಲ್ಲಿ ಕಿರಿಯ ವೈದ್ಯರ ಪ್ರತಿಭಟನೆ

   

–ಪಿಟಿಐ ಚಿತ್ರ

ಕೋಲ್ಕತ್ತ: ಬಡ್ತಿ ಪಡೆಯಲು ಸರ್ಕಾರವನ್ನು ನಂಬುವ ವೈದ್ಯರು, ಮಾತುಕತೆಗೆ ಮಾತ್ರ ಸರ್ಕಾರವನ್ನು ನಂಬುತ್ತಿಲ್ಲ. ತಮ್ಮ ಕರ್ತವ್ಯವನ್ನು ನಿಭಾಯಿಸದೇ, ವೇತನ ಪಡೆಯುವ ಉದ್ದೇಶದ ಹಿನ್ನೆಲೆಯಲ್ಲಿ ಮುಷ್ಕರದ ನಾಟಕವಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಸಚಿವ ಸಿದ್ದಿಕುಲ್ಲಾ ಚೌಧರಿ ಟೀಕಿಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಿರಿಯ ವೈದ್ಯರ ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶವಾಗಿದೆ’ ಎಂದು ಕಿಡಿಕಾರಿದ್ದಾರೆ.

‘ಕಿರಿಯ ವೈದ್ಯರು ಈ ನಾಟಕವನ್ನು ಕೂಡಲೇ ನಿಲ್ಲಿಸಬೇಕು. ಈ ನಾಟಕವು ಮಿತಿಗಳನ್ನು ಮೀರಿದೆ ಎಂಬುದು ಸ್ಪಷ್ಟವಾಗಿದೆ. ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ’ ಎಂದು ಅವರು ದೂರಿದ್ದಾರೆ.

‘ಕೆಲವು ಕಿರಿಯ ವೈದ್ಯರು ಸರ್ಕಾರದ ಮೇಲೆ ನಂಬಿಕೆಯಿಲ್ಲದ ಕಾರಣ ಮಾತುಕತೆಯ ನೇರ ಪ್ರಸಾರ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ, ಪ್ರತಿಭಟನಾಕಾರರು ತಮ್ಮ ಕರ್ತವ್ಯವನ್ನು ನಿರ್ವಹಿಸದೆ ಸರ್ಕಾರದಿಂದ ಸಂಬಳ ಪಡೆಯುತ್ತಿದ್ದಾರೆ. ಬಡ್ತಿಯ ಅಗತ್ಯವಿದ್ದಾಗ ಮಾತ್ರ ಅವರು ಸರ್ಕಾರವನ್ನು ನಂಬುತ್ತಾರೆ’ ಎಂದು ಚೌಧರಿ ಗುಡುಗಿದ್ದಾರೆ.

ಕೋಲ್ಕತ್ತದ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್‌ 9ರಂದು ನಡೆದಿದ್ದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ– ಕೊಲೆ ಪ್ರಕರಣ ಸಂಬಂಧ ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಿರಿಯ ವೈದ್ಯರು ಆರೋಗ್ಯ ಇಲಾಖೆಯ ಕೇಂದ್ರ ಕಚೇರಿ ಸ್ವಾಸ್ಥ್ಯ ಭವನದ ಎದುರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ಸಂಜೆ 5 ಗಂಟೆಗೆ ತಮ್ಮ ನಿವಾಸದಲ್ಲಿ ಮಾತುಕತೆಗೆ ಆಗಮಿಸುವಂತೆ ಕಿರಿಯ ವೈದ್ಯರ ನಿಯೋಗಕ್ಕೆ ಸಿಎಂ ಮಮತಾ ಬ್ಯಾನರ್ಜಿ ಆಹ್ವಾನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.