ಬೆಂಗಳೂರು: ಗಗನಯಾನಕ್ಕೆ ಇಸ್ರೊ ತಯಾರಿ ನಡೆಸಿರುವಂತೆಯೇ, ಗಗನಯಾತ್ರಿಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪ್ಯಾರಾಚೂಟ್ ತಯಾರಿಸುವ ಕಾರ್ಯವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆರಂಭಿಸಿದೆ.
ಒಟ್ಟು ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಇದ್ದು, ಬಹುತೇಕ 2022ರ ವೇಳೆಗೆ ಇದು ಕಾರ್ಯಗತವಾಗಲಿದೆ. ಅದಕ್ಕೆ ಮೊದಲು, ಅಂದರೆ ಇನ್ನೊಂದು ವರ್ಷದಲ್ಲಿ ಎಲ್ಲಾ ಪರೀಕ್ಷೆಗಳನ್ನೂ ನಡೆಸಿ, ಬಳಕೆಗೆ ಸಿದ್ಧವಾದ ಪ್ಯಾರಾಚೂಟ್‌ಗಳನ್ನು ಡಿಆರ್‌ಡಿಒ ಇಸ್ರೊಗೆ ಹಸ್ತಾಂತರಿಸಲಿದೆ.
ಗಗನಯಾನ ಸಂದರ್ಭದಲ್ಲಿ ಅತ್ಯಂತ ಬಿಸಿ ಹಾಗೂ ಅತ್ಯಂತ ಚಳಿ ಸಂದರ್ಭಗಳನ್ನು ಗಗನಯಾತ್ರಿಗಳು ಎದುರಿಸ
ಬೇಕಾಗುತ್ತದೆ. ಗಗನಯಾತ್ರಿಗಳ ಮಾಡ್ಯೂಲ್‌ಗಳ ಜತೆಯಲ್ಲಿ ಪ್ಯಾರಾಚೂಟ್ ಸಹ ಇರುತ್ತದೆ. ಯಾವ ಹಂತದಲ್ಲಿ ಪ್ಯಾರಾಚೂಟ್ ತೆರೆದುಕೊಳ್ಳಬೇಕು, ಸಮುದ್ರದಲ್ಲಿ ಇಳಿಯುವುದಾದರೆ ಎಷ್ಟು ಆಳಕ್ಕೆ ಹೋಗಿ ಅದು ಗಗನಯಾತ್ರಿಯನ್ನು ರಕ್ಷಿಸಬೇಕು ಮೊದಲಾದ ಪರೀಕ್ಷೆಗಳನ್ನು ನಡೆಸಿದ ಬಳಿಕವಷ್ಟೇ ಪ್ಯಾರಾಚೂಟ್ ಸಿದ್ಧವಾಗುತ್ತದೆ.
ಗಟ್ಟಿ ಹಗ್ಗ: ಪ್ಯಾರಾಚೂಟ್‌ನ ಹಗ್ಗ ಅದೆಷ್ಟು ದೃಢ ಎಂದರೆ ತೋರು ಬೆರಳು ಗಾತ್ರದ ಹಗ್ಗ 1,100 ಕೆ.ಜಿ.ತೂಕವನ್ನೂ ಹೊರಬಲ್ಲುದು. ನೈಲನ್ ಕೊಡೆ ಸಹ ಯಾವ ಗಾಳಿ, ಬಿಸಿಲಿಗೂ ಹರಿದು ಹೋಗದಷ್ಟು ದೃಢವಾಗಿರುತ್ತದೆ.
ಇಲ್ಲಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ 107ನೇ ವಿಜ್ಞಾನ ಕಾಂಗ್ರೆಸ್‌ನಲ್ಲಿ ಡಿಆರ್‌ಡಿಒ ಮಳಿಗೆಗೆ ಭೇಟಿ ನೀಡಿದಾಗ ಕೆಲವು ಮಾಹಿತಿಗಳು ದೊರೆತವು.
***
* 3 ಮಂದಿ -ಗಗನಯಾನಕ್ಕೆ ತೆರಳಲಿರುವ ವಾಯುಪಡೆ ಸಿಬ್ಬಂದಿ
* 5 ಜೊತೆ -ಡಿಆರ್‌ಡಿಒ ಸಿದ್ಧಪಡಿಸಲಿರುವ ಪ್ಯಾರಾಚ್ಯೂಟ್‌ಗಳು
* ಆಗ್ರಾ -ಪ್ಯಾರಾಚ್ಯೂಟ್ ಸಿದ್ಧವಾಗುತ್ತಿರುವ ಕೇಂದ್ರ
* 100 -ಪ್ಯಾರಾಚ್ಯೂಟ್ ತಯಾರಿಕಾ ತಂಡದಲ್ಲಿರುವ ಸಿಬ್ಬಂದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.