ಬಿಜಾಪುರ: ಛತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ನಕ್ಸಲರು ಹೂತಿಟ್ಟಿದ್ದ ಕಚ್ಚಾಬಾಂಬ್ (ಐಇಡಿ) ಸ್ಫೋಟಗೊಂಡಿದ್ದರಿಂದ, ಜಿಲ್ಲಾ ಮೀಸಲು ಪಡೆಯ (ಡಿಆರ್‌ಜಿ) ಹೆಡ್‌ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಆರ್‌ಪಿಎಫ್‌ನ ಕೋಬ್ರಾ ಪಡೆಯ ಯೋಧರೊಂದಿಗೆ ಮೀಸಲು ಪಡೆಯ ಸಿಬ್ಬಂದಿಯು ನಕ್ಸಲ್ ಚಟುವಟಿಕೆ ಹೆಚ್ಚಿರುವ ಹಿರೋಲಿ–ಕಾವಡ್ಗಾಂವ್ ಗ್ರಾಮಗಳ ನಡುವೆ ಗಸ್ತು ತಿರುಗುವಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
‘ಗಸ್ತು ತಿರುಗುವಾಗ ಡಿಆರ್‌ಜಿಯ ಹೆಡ್ ಕಾನ್‌ಸ್ಟೆಬಲ್ ಅರವಿಂದ ಎಕ್ಕಾ ಅವರು, ಮಣ್ಣಿನೊಳಗೆ ಹೂತಿಟಿದ್ದ ಕಚ್ಚಾಬಾಂಬ್ ಮೇಲೆ ಕಾಲಿಟ್ಟಿದ್ದಾರೆ. ಒತ್ತಡ ಬೀಳುತ್ತಿದ್ದಂತೆ ಅದು ಸ್ಫೋಟಗೊಂಡಿದೆ. ಎಕ್ಕಾ ಕಾಲಿಗೆ ಗಾಯಗಳಾಗಿದ್ದು, ತಕ್ಷಣಕ್ಕೆ ಪುಸ್ನಾರ್ ಘಟಕದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಬಿಜಾಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ರಾಯಪುರಕ್ಕೆ ಕರೆದೊಯ್ಯಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.