ADVERTISEMENT

ಆರ್ಯನ್‌ ಖಾನ್‌ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದ, ಪ್ರಕರಣದ ಸಾಕ್ಷಿ ಗೋಸಾವಿ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2021, 5:41 IST
Last Updated 28 ಅಕ್ಟೋಬರ್ 2021, 5:41 IST
ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರ್ಯನ್‌ ಖಾನ್‌ ಜತೆಗೆ ಎನ್‌ಸಿಬಿ ಕಚೇರಿಯಲ್ಲಿ ಗೋಸಾವಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು (ವೈರಲ್‌ ಚಿತ್ರ)
ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರ್ಯನ್‌ ಖಾನ್‌ ಜತೆಗೆ ಎನ್‌ಸಿಬಿ ಕಚೇರಿಯಲ್ಲಿ ಗೋಸಾವಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು (ವೈರಲ್‌ ಚಿತ್ರ)   

ಪುಣೆ: ಮುಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಕಿರಣ್ ಗೋಸಾವಿ ಅವರನ್ನು ಪುಣೆಯಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ಕಮಿಷನರ್ ಅಮಿತಾಭ್ ಗುಪ್ತಾ ತಿಳಿಸಿದ್ದಾರೆ.

2018ರ ವಂಚನೆ ಪ್ರಕರಣವೊಂದರಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.

ಇದಕ್ಕೂ ಹಿಂದೆ ಗೋಸಾವಿ ಉತ್ತರ ಪ್ರದೇಶದಲ್ಲಿ ಪೊಲೀಸರಿಗೆ ಶರಣಾಗುವ ಬಗ್ಗೆ ವದಂತಿ ಹರಡಿತ್ತು.

ADVERTISEMENT

ಮುಂಬೈ ಕರಾವಳಿಯ ಕ್ರೂಸ್ ಹಡಗಿನ ಮೇಲೆ ಎನ್‌ಸಿಬಿ ದಾಳಿ ನಡೆಸಿದ ಸ್ಥಳದಲ್ಲಿ ಮತ್ತು ಎನ್‌ಸಿಬಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದ ಗೋಸಾವಿ, ಶಾರುಕ್‌ ಪುತ್ರ ಆರ್ಯನ್ ಖಾನ್ ಅವರೊಂದಿಗೆ ಸೆಲ್ಫಿ ಫೋಟೊ ಮತ್ತು ವಿಡಿಯೊ ತೆಗೆದಿದ್ದರು. ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

‘ಖಾಸಗಿ ತನಿಖಾಧಿಕಾರಿ’ ಎಂದು ಹೇಳಿಕೊಂಡಿರುವ ಗೋಸಾವಿ ಅವರನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಡ್ರಗ್ಸ್‌ ಪ್ರಕರಣದಲ್ಲಿ ‘ಸ್ವತಂತ್ರ ಸಾಕ್ಷಿ’ ಎಂದು ಘೋಷಿಸಿದೆ.

ಮುಂಬೈನ ಐಷಾರಾಮಿ ಹಡಗಿನ ಡ್ರಗ್ಸ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಸೇರಿದಂತೆ ಸುಮಾರು 20 ಜನರನ್ನು ಬಂಧಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

ಡೀಲ್‌ಗೆ ಪ್ರಯತ್ನ ನಡೆಸಿದ್ದರೆ ಗೋಸಾವಿ?

ಶಾರುಕ್‌ ಅವರ ಮ್ಯಾನೇಜರ್‌ ಪೂಜಾ ದದಲಾನಿ ಅವರನ್ನು ಕೆ.ಪಿ.ಗೋಸಾವಿ ಭೇಟಿಯಾಗಿರುವುದನ್ನು ಎನ್‌ಸಿಬಿ ಸ್ಪಷ್ಟಪಡಿಸಿದೆ. ಆರ್ಯನ್‌ ಖಾನ್‌ ಬಿಡುಗಡೆಗೆ ₹24 ಕೋಟಿ ಬೇಡಿಕೆ ಇಡಲಾಗಿತ್ತು ಎಂದು ಮುಂಬೈ ನಿವಾಸಿ, ಪ್ರಕರಣದ ಸಾಕ್ಷಿಧಾರರಾಗಿರುವ ಪ್ರಭಾಕರ್‌ ಸೈಲ್‌ ಆರೋಪಿಸಿದ್ದರು.

ಗೋಸಾವಿ ಮತ್ತು ಸ್ಯಾಮ್‌ ಡಿಸೋಜಾ ಸೇರಿ ಬಿಡುಗಡೆಯ ಡೀಲ್‌ ಮಾತುಕತೆ ನಡೆಸಿದ್ದರು. ಅಂತಿಮವಾಗಿ ₹18 ಕೋಟಿಗೆ ಒಪ್ಪಂದವಾಗಿತ್ತು ಹಾಗೂ ಅದರಲ್ಲಿ ₹8 ಕೋಟಿ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್‌ ವಾಂಖೆಡೆಗೆ ಸೇರುವ ಸಾಧ್ಯತೆ ಇತ್ತು ಎಂದು ಆರೋಪಿಸಲಾಗಿದೆ.

ಆದರೆ, ಪ್ರಭಾಕರ್‌ ಸೈಲ್‌ ಆರೋಪಗಳನ್ನು ಗೋಸಾವಿ ನಿರಾಕರಿಸಿದ್ದಾರೆ. ತನ್ನ ಪರವಾಗಿ ಮಹಾರಾಷ್ಟ್ರದ ವಿರೋಧ ಪಕ್ಷದ ಯಾವುದಾದರೂ ನಾಯಕರು ಧ್ವನಿ ಎತ್ತಬೇಕು ಎಂದು ಗೋಸಾವಿ ಮನವಿ ಮಾಡಿಕೊಂಡಿದ್ದಾರೆ.

2019ರಿಂದಲೂ ಪೊಲೀಸರ ಹುಡುಕಾಟ

2018ರ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಿರಣ್ ಗೋಸಾವಿ ತಲೆ ಮರೆಸಿಕೊಂಡಿದ್ದರು. 2019ರಿಂದಲೂ ಗೋಸಾವಿ ಪುಣೆ ಸಿಟಿ ಪೊಲೀಸರಿಗೆ ಬೇಕಾದವರಾಗಿದ್ದರೆ. ಅಂದಿನಿಂದಲೂ ಕಾಣೆಯಾಗಿದ್ದ ಗೋಸಾವಿ ಎನ್‌ಸಿಬಿ ಕಚೇರಿಯಲ್ಲಿ ಆರ್ಯನ್‌ ಖಾನ್‌ ಜೊತೆಗೆ ಸೆಲ್ಫಿ ತೆಗೆದುಕೊಳ್ಳುತ್ತಾ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಗೋಸಾವಿ ಅವರನ್ನು ಪ್ರಕರಣದ ಸಾಕ್ಷಿ ಎಂದು ಎನ್‌ಸಿಬಿ ಪರಿಗಣಿಸಿದೆ. ಅಕ್ಟೋಬರ್ 14 ರಂದು ಪೊಲೀಸರು ಅವರ ವಿರುದ್ಧ ಲುಕೌಟ್ ನೋಟಿಸ್‌ ಹೊರಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.