ನವದೆಹಲಿ: ವಿಮಾನದಲ್ಲಿ ಇಬ್ಬರು ಪಾನಮತ್ತ ಸಹ ಪ್ರಯಾಣಿಕರಿಂದ ತಮಗೆ ಮತ್ತು ಮತ್ತೊಬ್ಬ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಇತ್ತೀಚೆಗೆ ಅಹಿತಕರ ಅನುಭವ ಉಂಟಾಯಿತು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಮಂಗಳವಾರ ಹೇಳಿದ್ದಾರೆ.
ಅಶಿಸ್ತಿನಿಂದ ವರ್ತಿಸುವ ವಿಮಾನ ಪ್ರಯಾಣಿಕರನ್ನು ನಿಭಾಯಿಸಲು ಅಗತ್ಯ ಕ್ರಮವನ್ನು ಕೋರಿ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿ ವಿಶ್ವನಾಥನ್ ಅವರು ತಮಗಾದ ಅಹಿತಕರ ಘಟನೆಯ ಕಹಿ ಅನುಭವವನ್ನು ವಿವರಿಸಿದರು.
‘ನಮಗೆ ಇತ್ತೀಚೆಗೆ 2.40 ಗಂಟೆಯ ವಿಮಾನ ಪ್ರಯಾಣದಲ್ಲಿ, ಪಾನಮತ್ತ ಸಹ ಪ್ರಯಾಣಿಕರಿಬ್ಬರಿಂದ ಕಿರಿಕಿರಿಯ ಅನುಭವವಾಯಿತು. ಇಬ್ಬರು ಪುರುಷ ಪ್ರಯಾಣಿಕರು ಕಂಠಪೂರ್ತಿ ಕುಡಿದಿದ್ದರು. ಅದರಲ್ಲಿ ಒಬ್ಬ ವಾಶ್‌ರೂಮ್‌ಗೆ ಹೋಗಿ ಮಲಗಿದ್ದ. ಇನ್ನೊಬ್ಬ ಹೊರಗಡೆ ವಾಂತಿ ಮಾಡಲು ಬ್ಯಾಗ್ ಇಟ್ಟುಕೊಂಡಿದ್ದ. ವಿಮಾನದಲ್ಲಿದ್ದ ಸಿಬ್ಬಂದಿ ಎಲ್ಲರೂ ಮಹಿಳೆಯರೇ. 30 ರಿಂದ 35 ನಿಮಿಷವಾದರೂ ಯಾರಿಗೂ ವಾಶ್‌ರೂಮ್ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ನಂತರ ಸಿಬ್ಬಂದಿ, ನನ್ನ ಸಹ ಪ್ರಯಾಣಿಕರೊಬ್ಬರಿಗೆ ವಾಶ್‌ರೂಮ್ ಬಾಗಿಲು ತೆರೆಯಲು ಮತ್ತು ಪಾನಮತ್ತ ವ್ಯಕ್ತಿಯನ್ನು ಕರೆದೊಯ್ದು ಸೀಟಿಗೆ ಕುಳ್ಳಿರಿಸಲು ವಿನಂತಿಸಿದರು’ ಎಂದು ಅವರು ಘಟನೆಯನ್ನು ಎಳೆಎಳೆಯಾಗಿ ವಿವರಿಸಿದರು.
ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಒಳಗೊಂಡ ಪೀಠದಲ್ಲಿದ್ದ ನ್ಯಾಯಮೂರ್ತಿ ವಿಶ್ವನಾಥನ್ ಅವರು, ಅಶಿಸ್ತಿನ ವಿಮಾನ ಪ್ರಯಾಣಿಕರ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಸೃಜನಾತ್ಮಕ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರಿಗೆ ಸೂಚಿಸಿದರು.
2022ರ ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಪುರುಷ ಸಹ ಪ್ರಯಾಣಿಕ ಕುಡಿದ ಮತ್ತಿನಲ್ಲಿ ತಮ್ಮ ಮೈಮೇಲೆ ಮೂತ್ರ ಮಾಡಿದ ಸಂಬಂಧ 73 ವರ್ಷದ ಮಹಿಳೆ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ನ್ಯೂಯಾರ್ಕ್‌ನಿಂದ ದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಸಹ ಪ್ರಯಾಣಿಕರೊಬ್ಬರ ಮೇಲೆ ಶಂಕರ್ ಮಿಶ್ರಾ ಎಂಬವರು ಮೂತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. 2023ರ ನವೆಂಬರ್ 26ರಂದು ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಈ ಘಟನೆ ಸಂಭವಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.