ನವದೆಹಲಿ: ತನ್ನದೇ ಉಪಗ್ರಹವನ್ನು ಕಕ್ಷೆಗೆ ಕಳುಹಿಸುವ ಮಹಾತ್ವಾಕಾಂಕ್ಷೆಯ ಯೋಜನೆ ಹೊಂದಿರುವ ದೆಹಲಿ ವಿಶ್ವವಿದ್ಯಾಲಯವು, ತನ್ನ ಆವರಣದೊಳಗೆ ವಿದ್ಯುತ್ ಚಾಲಿತ ವಾಹನ ಹೊರತುಪಡಿಸಿ ಅನ್ಯ ವಾಹನಗಳಿಗೆ ಅವಕಾಶ ನೀಡದಿರುವ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೀಡುವ ಯೋಜನೆಗಳನ್ನು ಹೊಂದಿರುವುದಾಗಿ ಹೇಳಿದೆ.
ಗುರುವಾರ ನಡೆದ ಸಭೆಯ ನಂತರ ವಿಶ್ವವಿದ್ಯಾಲಯದ ಸಾಂಸ್ಥಿಕ ಅಭಿವೃದ್ಧಿ ಯೋಜನೆ 2024 ಅನ್ನು ಬಿಡುಗಡೆ ಮಾಡಿರುವ ದೆಹಲಿ ವಿಶ್ವವಿದ್ಯಾಲಯ, ಮುಂದಿನ ದಿನಗಳಲ್ಲಿ ತನ್ನ ಗುರಿ ಹಾಗೂ ಜಾರಿಗೆ ತರಲಿರುವ ನೀತಿಗಳ ಕುರಿತು ಹೇಳಿದೆ.
ದೆಹಲಿ ವಿಶ್ವವಿದ್ಯಾಲಯದ ಉಪಗ್ರಹದ ಮೂಲಕ ವೈಜ್ಞಾನಿಕ ಸಂಶೋಧನೆ, ದೂರಸಂಪರ್ಕ, ದೂರ ಶಿಕ್ಷಣಕ್ಕೆ ಜಿಪಿಎಸ್ ವ್ಯವಸ್ಥೆ ಜಾರಿಗೆ ತರುವ ಉದ್ದೇಶ ಹೊಂದಿದೆ. ಇದರಲ್ಲಿ ಇಸ್ರೊ ನೆರವು ಪಡೆಯುವ ಸಾಧ್ಯತೆಗಳಿವೆ ಎಂದೆನ್ನಲಾಗಿದೆ.
ದೆಹಲಿ ವಿವಿ ಕ್ಯಾಂಪಸ್ ಅನ್ನು ಮಾಲಿನ್ಯ ಮುಕ್ತವಾಗಿಸುವ ಉದ್ದೇಶದೊಂದಿಗೆ ಇಂಧನ ದಹಿಸುವ ಎಂಜಿನ್ ಹೊಂದಿರುವ ವಾಹನಗಳಿಗೆ ಕ್ಯಾಂಪಸ್ ಪ್ರವೇಶ ನಿರ್ಬಂಧಿಸುವ ಯೋಜನೆಯನ್ನೂ ಹೊಂದಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಕ್ಯಾಂಪಸ್‌ನ ಛಾತ್ರ ಮಾರ್ಗದಿಂದ ಆರಂಭಿಸಲಾಗುವುದು. ಈ ಯೋಜನೆಗಳ ವಿಧಾನ, ಅನುಷ್ಠಾನ ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆ ಕುರಿತು ಆಯಾ ಕಾಲಕ್ಕೆ ನಿರ್ಧರಿಸಲಾಗುವುದು ಎಂದೆನ್ನಲಾಗಿದೆ.
ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಊಟ ನೀಡುವ ಯೋಜನೆಯನ್ನು ಪರಿಚಯಿಸಲಾಗುವುದು. ಕೆಲಸಕ್ಕೆ ಬದಲಾಗಿ ಕೆಫೆಟೇರಿಯಾದಲ್ಲಿ ಉಚಿತ ಊಟ ನೀಡುವ ಯೋಜನೆ ಇದಾಗಿದೆ. ಇಲ್ಲಿ ಆಹಾರ ಸುರಕ್ಷತೆಗೆ ಒತ್ತು ನೀಡಲಾಗುವುದು. ಆಹಾರ ಸಾಮಗ್ರಿಗಳ ಖರೀದಿಗೆ ಸ್ಥಳೀಯ ಸ್ವಸಹಾಯ ಗುಂಪುಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.
ಕ್ಯಾಂಪಸ್‌ನಲ್ಲಿರುವ ಆರು ಲಕ್ಷ ಜನರನ್ನು ಗುರಿಯಾಗಿಟ್ಟುಕೊಂಡು ವಿಶ್ವವಿದ್ಯಾಲಯವು ತನ್ನದೇ ಆದ ವಾಣಿಜ್ಯ ಮಳಿಗೆಗಳ ಪ್ರದೇಶ ಪ್ರಾರಂಭಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ಇಲ್ಲಿ ವಿದ್ಯಾರ್ಥಿಗಳೇ ಆರಂಭಿಸಿದ ಸ್ಟಾರ್ಟ್‌ಅಪ್‌ಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಿದ್ಯಾರ್ಥಿಗಳ ಸ್ಟಾರ್ಟ್ ಅಪ್‌ಗಳಿಗೆ ಮಾರ್ಗದರ್ಶನ ಹಾಗೂ ಆರ್ಥಿಕ ಸಹಾಯಕ್ಕಾಗಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಪರ್ಕ ಜಾಲವನ್ನು ಸದೃಢಗೊಳಿಸಲು ಯೋಜನೆ ರೂಪಿಸುವುದಾಗಿ ವಿವಿ ಹೇಳಿದೆ. ಇಂಟರ್ನ್‌ಶಿಪ್, ಬಹುರಾಷ್ಟ್ರೀಯ ಕಂಪನಿಗಳ ಪ್ರಾಯೋಜಕತ್ವದ ಪೀಠಗಳ ಸ್ಥಾಪನೆಯೂ ಇದರ ಭಾಗವಾಗಿರಲಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.