ನವದೆಹಲಿ: ಶ್ರೀಮದ್ ಭಗವದ್ಗೀತೆ ಕುರಿತ ಪ್ರಮಾಣಪತ್ರ ಆಧಾರಿತ ಕೋರ್ಸ್‌ಗೆ ಕಡ್ಡಾಯ ಹಾಜರಾತಿ ಮತ್ತು ನೋಂದಣಿ ಮಾಡಿಕೊಳ್ಳುವಂತೆ ಹೊರಡಿಸಲಾದ ಆದೇಶವನ್ನು ಹಿಂಪಡೆಯಬೇಕು ಎಂದು ದೆಹಲಿ ವಿಶ್ವವಿದ್ಯಾಲಯದ ರಾಮಾನುಜನ್ ಕಾಲೇಜಿನ ಔಟ್‌ಫಿಟ್ ಡೆಮಾಕ್ರೆಟಿಕ್ ಟೀಚರ್ಸ್ ಫ್ರಂಟ್ ಆಗ್ರಹಿಸಿದೆ.
ಈ ಕುರಿತು ಬುಧವಾರ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆ, ‘ಭಗವದ್ಗೀತೆ ಕುರಿತ ಸರ್ಟಿಫಿಕೇಟ್ ಕೋರ್ಸ್‌ಗೆ ಹೆಸರು ನೋಂದಾಯಿಸಲು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಒತ್ತಾಯಿಸಲಾಗುತ್ತಿದ್ದು, ಇದು ಕಾಲೇಜಿನ ಆಡಳಿತ ಮಂಡಳಿಯ ನಿರಂಕುಶ ಕ್ರಮವಾಗಿದೆ. ತಮ್ಮ ಕರ್ತವ್ಯದ ಅವಧಿ ಹೊರತುಪಡಿಸಿ ಈ ಕೋರ್ಸ್‌ಗೆ ಕಡ್ಡಾಯವಾಗಿ ಹಾಜರಾಗುವಂತೆ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಒತ್ತಾಯಿಸಲಾಗುತ್ತಿದೆ’ ಎಂದು ಆರೋಪಿಸಿದೆ.
ಈ ಪತ್ರ ಕುರಿತಂತೆ ರಾಮಾನುಜನ್ ಕಾಲೇಜಿನ ಪ್ರಾಚಾರ್ಯ ಎಸ್.ಪಿ.ಅಗರ್ವಾಲ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
‘ವೃತ್ತಿ ಸಮಯ ಕೊನೆಗೊಳ್ಳುವುದು ಸಂಜೆ 6.30ಕ್ಕೆ. ಅದನ್ನು ಪೂರ್ಣಗೊಳಿಸಿ ಕೋರ್ಸ್‌ಗೆ ಹಾಜರಾಗುವಂತೆ ಒತ್ತಾಯಿಸಲಾಗುತ್ತಿರುವುದನ್ನು ಒಪ್ಪಲಾಗದು. ಇದು ನಿಜಕ್ಕೂ ಅಕ್ರಮವಾಗಿ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಯನ್ನು ಬಳಸಿಕೊಳ್ಳುವ ಕ್ರಮವಾಗಿದೆ’ ಎಂದು ಶಿಕ್ಷಕರು ಆರೋಪಿಸಿದ್ದಾರೆ.
ಶ್ರೀಮದ್ ಭಗವದ್ಗೀತೆ ಕುರಿತ ರಿಫ್ರೆಷರ್ ಕೋರ್ಸ್ ಅನ್ನು ಜ. 9ರವರೆಗೆ ಕಾಲೇಜಿನಲ್ಲಿ ಸಂಜೆ 4.30ರಿಂದ 6.30ರವರೆಗೆ ಶಿಕ್ಷಕರು ಹಾಗೂ ಶಿಕ್ಷಕೇತರರಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಅಭ್ಯಸಿಸುವಂತೆ ಸೂಚಿಸಲಾಗಿದೆ. ಭಾರತೀಯ ಜ್ಞಾನ ವ್ಯವಸ್ಥೆ ಕೇಂದ್ರವು ಕಾಲೇಜು ಒಂದನ್ನು ಆರಂಭಿಸಲು ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇದಕ್ಕಾಗಿ ಈ ವಿಷಯದಲ್ಲಿ ಜ್ಞಾನ ಪಡೆಯುವ ನಿಟ್ಟಿನಲ್ಲಿ ಕೋರ್ಸ್ ಜಾರಿಗೊಳಿಸಲಾಗುತ್ತಿದೆ’ ಎಂದು ಪ್ರಾಚಾರ್ಯ ಅಗರ್ವಾಲ್ ಇಮೇಲ್ ಮೂಲಕ ಶಿಕ್ಷಕರಿಗೆ ಹೇಳಿದ್ದಾರೆ.
‘ಕಳೆದ ಒಂದು ವರ್ಷ ಅವಧಿಯಲ್ಲಿ ಶಿಕ್ಷಕರಾಗಿ ನೇಮಕಗೊಂಡವರು ಈ ಕೋರ್ಸ್ ಅನ್ನು ಆಫ್‌ಲೈನ್ ಮೂಲಕ ತೆಗೆದುಕೊಳ್ಳುವುದು ಕಡ್ಡಾಯ. ಹಿರಿಯ ಉಪನ್ಯಾಸಕರು ಕೋರ್ಸ್ ಅನ್ನು ಆಫ್‌ಲೈನ್ ಅಥವಾ ಆನ್‌ಲೈನ್ ಮೂಲಕವೂ ತೆಗೆದುಕೊಳ್ಳಬಹುದು’ ಎಂದು ಇಮೇಲ್‌ನಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.