ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ರಾಜಧಾನಿಯ ಎಲ್ಲಾ ಶಾಲೆಗಳು ಅಕ್ಟೋಬರ್ 31 ರವರೆಗೆತೆರೆಯದಂತೆ ಆದೇಶಿಸಲಾಗಿದೆ ಎಂದು ದೆಹಲಿಯ ಸರ್ಕಾರಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸ್ವಯಂಪ್ರೇರಿತರಾಗಿ ಶಾಲೆಗೆ ಬರುವ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 21 ರಿಂದ ಶಾಲೆಗಳನ್ನು ತೆರೆಯಬಹುದು ಎಂದು ಕೇಂದ್ರವು ಅನುಮತಿ ನೀಡಿದ್ದರೂ ಕೂಡ ದೆಹಲಿ ಸರ್ಕಾರ ಈ ಹಿಂದೆ ಅಕ್ಟೋಬರ್ 5ರವರೆಗೆ ಶಾಲೆಗಳನ್ನು ಮುಚ್ಚುವ ಆದೇಶವನ್ನು ವಿಸ್ತರಿಸಿತ್ತು.
'ಶಾಲೆಗಳನ್ನು ತೆರೆಯದಂತೆ ಅಕ್ಟೋಬರ್ 31ರವರೆಗೂ ವಿಸ್ತರಿಸಲು ಶಿಕ್ಷಣ ನಿರ್ದೇಶನಾಲಯಕ್ಕೆ (ಡಿಒಇ) ನಿರ್ದೇಶಿಸಲಾಗಿದೆ. ಈ ಕುರಿತು ಔಪಚಾರಿಕ ಆದೇಶವನ್ನು ಡಿಒಇ ನಾಳೆ ಹೊರಡಿಸಲಿದೆ' ಎಂದು ಉಪಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿಯಾಗಿರುವ ಮನಿಷ್ ಸಿಸೋಡಿಯಾ ಅವರೇ ಶಿಕ್ಷಣ ಖಾತೆಯನ್ನು ನಿರ್ವಹಿಸುತ್ತಿದ್ದಾರೆ.
ಕೊರೊನಾ ವೈರಸ್ ವೈರಸ್ ಸೋಂಕು ಹರಡುವಿಕೆಯನ್ನು ತಡೆಯುವ ಭಾಗವಾಗಿ ಕೇಂದ್ರವು ದೇಶಾದ್ಯಂತ ತರಗತಿಗಳನ್ನು ಸ್ಥಗಿತಗೊಳಿಸುವಿಕೆಯನ್ನು ಘೋಷಿಸಿದ ನಂತರ ಮಾರ್ಚ್ 16 ರಿಂದಲೇ ದೇಶದಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳನ್ನು ಮುಚ್ಚಲಾಗಿದೆ.
ವೈರಸ್ ಹರಡುವುದನ್ನು ತಡೆಗಟ್ಟಲು ಮಾರ್ಚ್ 25 ರಂದು ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿತ್ತು.
ಇತ್ತೀಚಿನ ಅನ್‌ಲಾಕ್ ಮಾರ್ಗಸೂಚಿಗಳ ಪ್ರಕಾರ, ಕಂಟೈನ್‌ಮೆಂಟ್ ಝೋನ್ ಅಲ್ಲದ ಕಡೆಯ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಅಕ್ಟೋಬರ್ 15 ರ ನಂತರ ಮತ್ತೆ ತೆರೆಯಬಹುದು. ಆದಾಗ್ಯೂ, ಶಿಕ್ಷಣ ಸಂಸ್ಥೆಗಳನ್ನು ಮತ್ತೆ ತೆರೆಯಬೇಕೆ, ಯಾವಾಗ ತೆರೆಯಬೇಕು ಎಂಬ ನಿರ್ಧಾರವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳಬಹುದು ಎಂದು ಕೇಂದ್ರ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.