ಢಾಕಾ: ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಯನ್ನು ಸರಳವಾಗಿ ಆಚರಿಸುವ ಮೂಲಕ ಸಮುದಾಯದ ಮೇಲಿನ ದಾಳಿಯ ವಿರುದ್ಧ ಪ್ರತಿಭಟಿಸಲು ಬಾಂಗ್ಲಾದ ಅಲ್ಪಸಂಖ್ಯಾತ ನಾಯಕರು ನಿರ್ಧರಿಸಿದ್ದಾರೆ.
ಉದ್ಯೋಗದಲ್ಲಿನ ಮೀಸಲಾತಿ ವಿರೋಧಿಸಿ ನಡೆದ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದ ಪರಿಣಾಮ ಬಾಂಗ್ಲಾ ಪ್ರಧಾನಿಯಾಗಿದ್ದ ಶೇಕ್ ಹಸೀನಾ ಅಧಿಕಾರ ಕಳೆದುಕೊಂಡಿದ್ದರು. ಇದರ ಬೆನ್ನಲ್ಲೆ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಭೀಕರ ದಾಳಿ ನಡೆದಿತ್ತು.
ದುರ್ಗಾಪೂಜೆಯ ಸಂಭ್ರಮಕ್ಕೆ ಭಯದ ಕಾರ್ಮೋಡ ಕವಿದಿದ್ದು, ಹಲವರು ಹಬ್ಬವನ್ನು ಸಾಂಪ್ರಾದಾಯಿಕ ಆಚರಣೆಗೆ ಸೀಮಿತಗೊಳಿಸಿದ್ದಾರೆ.
‘ಈ ವರ್ಷ ನಾವು ದುರ್ಗಾ ಪೂಜೆಯನ್ನು ಮಾತ್ರ ನಡೆಸಲಿದ್ದೇವೆ. ಯಾವುದೇ ರೀತಿಯಲ್ಲಿ ಹಬ್ಬದ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ’ ಎಂದು ಬಾಂಗ್ಲಾದೇಶದ ಹಿಂದೂ, ಬೌದ್ದ, ಕ್ರೈಸ್ತ ಸಮುದಾಯಗಳ ಒಕ್ಕೂಟದ (ಬಿಎಚ್‌ಬಿಸಿಒಪಿ) ಸದಸ್ಯ ರಂಜನ್ ಕರ್ಮಕರ್ ತಿಳಿಸಿದ್ದಾರೆ.
‘ಇದು ಹಿಂದೂ ಸಮುದಾಯದ ಪ್ರತಿಭಟನೆಯ ಭಾಗವಾಗಿದೆ. ಭೀಕರ ದಾಳಿಯಿಂದ ರೋಸಿ ಹೋಗಿರುವ ಹಿಂದೂಗಳು ಹಬ್ಬವನ್ನು ಆಚರಿಸುವ ಸ್ಥಿತಿಯಲ್ಲಿ ಇಲ್ಲ’ ಎಂದು ಹೇಳಿದರು.
‘ಅಲ್ಪಸಂಖ್ಯಾತರ ಮೇಲಿನ ದಾಳಿಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮತ್ತು ಅಲ್ಪಸಂಖ್ಯಾತರ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಭಿತ್ತಿಪತ್ರಗಳ ಮೂಲಕ ಆಗ್ರಹಿಸಲು ಸೂಚಿಸಲಾಗಿದೆ’ ಎಂದು ಬಾಂಗ್ಲಾದೇಶ್ ಪೂಜಾ ಉದ್ಯಾಪನಾ ಪರಿಷದ್‌ನ ಮುಖ್ಯಸ್ಥ ಬಸುದೇಬ್ ಧರ್ ಹೇಳಿದ್ದಾರೆ.
‘ದುರ್ಗಾ ಪೂಜೆ ಸೇರಿದಂತೆ ಅಲ್ಪಸಂಖ್ಯಾತರ ಧಾರ್ಮಿಕ ಆಚರಣೆಗಳಿಗೆ ಭದ್ರತೆ ಒದಗಿಸಲಾಗುವುದು’ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಭರವಸೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.