ಪಟ್ನಾ: ಬಿಹಾರದಲ್ಲಿ ಮಹಾಘಟಬಂಧನ ಸ್ವಲ್ಪದರಲ್ಲೇ ಅಧಿಕಾರದಿಂದ ವಂಚಿತವಾದ ಬಳಿಕ ಆರ್‌ಜೆಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿದೆ.
ಮಹಾಮೈತ್ರಿಕೂಟಕ್ಕೆ ಕಾಂಗ್ರೆಸ್ ಸಂಕೋಲೆಯಾಗಿತ್ತು ಎಂದು ಆರ್‌ಜೆಡಿ ನಾಯಕ ಶಿವಾನಂದ ತಿವಾರಿ ಆರೊಪಿಸಿದ್ದಾರೆ. ಸ್ಪರ್ಧೆ ಮಾಡಲು 70 ಕ್ಷೇತ್ರಗಳನ್ನು ಕೇಳಿ ಪಡೆದ ಕಾಂಗ್ರೆಸ್, ಅಷ್ಟು ಸಮಾವೇಶಗಳನ್ನು ನಡೆಸಲೇ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
'ರಾಹುಲ್ ಗಾಂಧಿ ಬಿಹಾರದಲ್ಲಿ ಕೇವಲ ಮೂರು ದಿನ ಪ್ರಚಾರ ನಡೆಸಿದರು. ಪ್ರಿಯಾಂಕಾ ಗಾಂಧಿ ಇಲ್ಲಿಗೆ ಬರಲೇ ಇಲ್ಲ. ಬಿಹಾರದ ಜನಕ್ಕೆ ಪರಿಚಯವೇ ಇಲ್ಲದವರು ಬಂದು ಇಲ್ಲಿ ಪ್ರಚಾರ ಮಾಡಿ ಹೋದರು. ಇದು ಸರಿಯಲ್ಲ,' ಎಂದು ತಿವಾರಿ ಆಕ್ರೋಶ ಹೊರಹಾಕಿದ್ದಾರೆ.
'ಬಿಹಾರದಲ್ಲಿ ಚುನಾವಣೆ ಕಾವೇರಿದ್ದರೂ, ರಾಹುಲ್ ಗಾಂಧಿ ಅವರು ಸೋದರಿ ಪ್ರಿಯಾಂಕಾ ಗಾಂಧಿ ಅವರ ಮನೆ ಇರುವ ಶಿಮ್ಲಾದಲ್ಲಿ ಪ್ರವಾಸ ಕೈಗೊಂಡಿದ್ದರು. ಕಾಂಗ್ರೆಸ್ ನಡೆಯುತ್ತಿರುವುದೇ ಹೀಗೆಯೇ? ಅವರು ಪಕ್ಷ ನಡೆಸುತ್ತಿರುವ ರೀತಿಯಿಂದಲೇ ಬಿಜೆಪಿಗೆ ಲಾಭವಾಗುತ್ತಿದೆ ಎಂದು ನಾವು ಆರೋಪ ಮಾಡಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಅವರಿಗಿಂತ ವಯಸ್ಸಿನಲ್ಲಿ ಹಿರಿಯರು. ಅವರು ರಾಹುಲ್‌ಗಿಂತಲೂ ಹೆಚ್ಚಿನ ಸಮಾವೇಶಗಳನ್ನು ನಡೆಸಿದರು. ರಾಹುಲ್ ಯಾಕೆ ಕೇವಲ ಮೂರೇ ಸಮಾವೇಶಕ್ಕೆ ಸೀಮಿತರಾದರು. ಬಿಹಾರ ಚುನಾವಣೆ ವಿಷಯದಲ್ಲಿ ಕಾಂಗ್ರೆಸ್ ಗಂಭೀರವಾಗಿರಲಿಲ್ಲ ಎಂಬುದು ಇದರಿಂದ ಸಾಬೀತಾಗುತ್ತಿದೆ. ಪ್ರಿಯಾಂಕಾ ಗಾಂಧಿ ಅವರು ಬಿಹಾರದ ಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಎಂಬ ಸುದ್ದಿ ಚುನಾವಣೆಗೂ ಮೊದಲೇ ಎದ್ದಿತ್ತು. ಆದರೆ, ಅವರು ಪ್ರಚಾರಕ್ಕೆ ಬರಲೇ ಇಲ್ಲ,' ಎಂದು ಬೇಸರ ವ್ಯಕ್ತಪಡಿಸಿದರು.
'ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪ್ರಾಮುಖ್ಯತೆ ನೀಡುತ್ತದೆ. ಆದರೆ, ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಅದು ವಿಫಲವಾಗುತ್ತದೆ. ಉತ್ತರ ಪ್ರದೇಶದಲ್ಲಿ ಅದು ಅಖಿಲೇಶ್ ಯಾದವ್ ಅವರೊಂದಿಗೆ ವರ್ತಿಸಿದ ರೀತಿ ಇರಬಹುದು, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿ, ಎನ್‌ಸಿಪಿಗಿಂತ ಕಡಿಮೆ ಸ್ಥಾನಗಳನ್ನು ಗೆದ್ದಿರುವುದು ಇರಬಹುದು. ಕಾಂಗ್ರೆಸ್ ಗರಿಷ್ಠ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸುವ ಉಮೇದು ತೋರಿಸುತ್ತದೆಯೇ ಹೊರತು, ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ,' ಎಂದು ತಿವಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.