ADVERTISEMENT

ಅದಾನಿ ಪ್ರಕರಣ: ವರನ ವೇಷದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಧರಣಿ, ಗಮನ ಸೆಳೆದ ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2023, 9:04 IST
Last Updated 16 ಮಾರ್ಚ್ 2023, 9:04 IST
   

ನವದೆಹಲಿ: ಅದಾನಿ ಸಮೂಹ ಕಂಪನಿ ನಡೆಸಿದೆ ಎನ್ನಲಾದ ಹಗರಣದ ತನಿಖೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ನಾಯಕರು ಗುರುವಾರ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆ ವೇಳೆ ವರನ ವೇಷ ಧರಿಸಿದ್ದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಲೆ ಮೇಲೆ ಪೇಟ, ಎರಡು ಸಾವಿರ ಮುಖಬೆಲೆಯ ನಕಲಿ ನೋಟುಗಳ ಹಾರವನ್ನು ಕುತ್ತಿಗೆಗೆ ಹಾಕಿಕೊಂಡು ಎಲ್ಲರ ಗಮನ ಸೆಳೆದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅದಾನಿ ಸಮೂಹ ಕಂಪನಿ ನಡೆಸಿದೆ ಎನ್ನಲಾದ ಹಗರಣದ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಆಗ್ರಹಿಸಿ 18 ವಿರೋಧ ಪಕ್ಷಗಳ ಸಂಸದರು ಬುಧವಾರ ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿಗೆ ಮೆರವಣಿಗೆ ನಡೆಸಲು ಮುಂದಾಗಿದ್ದರು. ಆದರೆ, ಅವರನ್ನು ಸಂಸತ್ತಿನ ಬಳಿಯೇ ತಡೆಯಲಾಯಿತು. ಅವರ ಬೇಡಿಕೆಗಳನ್ನು ಇ.ಡಿಗೆ ಇ–ಮೇಲ್‌ ಮೂಲಕ ಸಲ್ಲಿಸುವಂತೆ ಅವರಿಗೆ ಹೇಳಲಾಯಿತ್ತು.

ADVERTISEMENT

ಮೆರವಣಿಗೆಗೆ ತಡೆಯೊಡ್ಡಿದ ಕುರಿತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್‌ ಮಾಡಿದ್ದು, ‘ಮೋದಿ ಅವರ ಆಪ್ತ ಸ್ನೇಹಿತ ಅದಾನಿ ಅವರು ಭಾಗಿಯಾಗಿರುವ ಮೆಗಾ ಹಗರಣದ ಕುರಿತು ಇ.ಡಿಗೆ ವಿವರವಾದ ಪತ್ರ ಸಲ್ಲಿಸಲು ನಾವು ಹೊರಟಿದ್ದೆವು. ಆದರೆ ಸರ್ಕಾರ ನಮ್ಮನ್ನು ತಡೆಯಿತು. ವಿರೋಧ ಪಕ್ಷಗಳ ಮೇಲೆ ನಿರಂತರವಾಗಿ ದಾಳಿ ನಡೆಸುವ ಇ.ಡಿ. ಮೋದಿ ಅವರ ಸ್ನೇಹಿತನ ಮೇಲೆ ದಾಳಿ ನಡೆಸುವುದನ್ನು ಏಕೆ ಮರೆತಿದೆ’ ಎಂದು ಪ್ರಶ್ನಿಸಿದ್ದರು.

ಇ.ಡಿಗೆ ಪತ್ರ: ಇ.ಡಿ. ನಿರ್ದೇಶಕ ಎಸ್‌.ಕೆ. ಮಿಶ್ರಾ ಅವರಿಗೆ 16 ವಿರೋಧಪಕ್ಷಗಳ ಸಂಸದರು ಜಂಟಿ ಪತ್ರ ಬರೆದಿದ್ದಾರೆ. ಇದಕ್ಕೆ 16 ಪಕ್ಷಗಳು ಸಹಿ ಹಾಕಿವೆ. ‘ರಾಜಕೀಯ ಪ್ರೇರಿತ ಮೊಕದ್ದಮೆಗಳನ್ನು ಹುರುಪಿನಿಂದ ಕೈಗೆತ್ತಿಕೊಳ್ಳುವ ಇ.ಡಿಯು ಅದಾನಿ ಹಗರಣ ವಿಚಾರದಲ್ಲಿ ತನ್ನ ಕರ್ತವ್ಯದಿಂದ ನುಣುಚಿಕೊಳ್ಳುವಂತಿಲ್ಲ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.