ನವದೆಹಲಿ:‘ದುಷ್ಯಂತ್ ಚೌಟಾಲ ಎಂದರೆ ಯಾರು ಎಂಬುದಾದರೂ ಕನಿಷ್ಠಪಕ್ಷ ಅವರಿಗೆ ಗೊತ್ತಿದೆಯಲ್ವಾ’. ಶಿವಸೇನಾ ನಾಯಕ ಸಂಜಯ್ ರಾವತ್ ತಮ್ಮ ವಿರುದ್ಧ ಮಾಡಿರುವ ಟೀಕೆಗೆ ಹರಿಯಾಣದ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲ ತಿರುಗೇಟು ನೀಡಿದ್ದು ಹೀಗೆ.
‘ನನ್ನ ತಂದೆ ಆರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಅವರ ಯೋಗಕ್ಷೇಮದ ಬಗ್ಗೆ ರಾವತ್ ಎಂದೂ ವಿಚಾರಿಸಿಲ್ಲ. ಅಜಯ್ ಚೌಟಾಲ ಅವರು ಶಿಕ್ಷೆಯ ಅವಧಿ ಪೂರ್ಣಗೊಳ್ಳದೆ ಹೊರಬರುವುದಿಲ್ಲ. ಸಂಜಯ್ ನೀಡಿರುವ ಹೇಳಿಕೆ ಅವರ ಯೋಗ್ಯತೆಗೆ ತಕ್ಕುದಲ್ಲ’ ಎಂದುದುಷ್ಯಂತ್ ಹೇಳಿದ್ದಾರೆ.
ಸಂಜಯ್ ಅವರ ಪಕ್ಷ (ಶಿವಸೇನಾ) ಸುದೀರ್ಘ ಅವಧಿಯಿಂದ ಬಿಜೆಪಿ ಜತೆ ಗುರುತಿಸಿಕೊಂಡಿದೆ. ನಮ್ಮ ಪಕ್ಷ 11 ತಿಂಗಳುಗಳ ಹಿಂದಷ್ಟೇಸ್ಥಾಪನೆಯಾಗಿದೆ. ಇತರರ ವಿರುದ್ಧ ಹೋರಾಡುವುದು ಮತ್ತು ಬೆದರಿಕೆಯ ರಾಜಕಾರಣ ನಡೆಸುವುದು ನಮ್ಮ ಉದ್ದೇಶವಲ್ಲ. ಮುಂದಿನ ಐದು ವರ್ಷಗಳಲ್ಲಿ ಪ್ರಾಮಾಣಿಕ ರಾಜಕಾರಣವನ್ನು ಅನುಷ್ಠಾನಗೊಳಿಸುವುದು ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಚಾರವಾಗಿ ಮಂಗಳವಾರ ಬೆಳಿಗ್ಗೆ ಹೇಳಿಕೆ ನೀಡಿದ್ದ ಶಿವಸೇನಾದವಕ್ತಾರ ಸಂಜಯ್ ರಾವತ್, ಹರಿಯಾಣದಲ್ಲಿ ಬಿಜೆಪಿ–ಜೆಜೆಪಿ ಸರ್ಕಾರ ರಚನೆಯಾಗಿರುವುದನ್ನು ಉಲ್ಲೇಖಿಸಿ ದುಷ್ಯಂತ್ ಬಗ್ಗೆ ವ್ಯಂಗ್ಯವಾಡಿದ್ದರು.
‘ತಂದೆ ಜೈಲಿನಲ್ಲಿರುವದುಷ್ಯಂತಮಹಾರಾಷ್ಟ್ರದಲ್ಲಿ ಇಲ್ಲ. ಇಲ್ಲಿ ಇರುವುದು ನಾವು.ಸತ್ಯ ಮತ್ತು ಧರ್ಮದ ಮೇಲೆ ನಂಬಿಕೆಇಟ್ಟು ನಾವು ರಾಜಕೀಯ ಮಾಡುತ್ತಾ ಬಂದಿದ್ದೇವೆ,’ ಎಂದು ಅವರು ಹೇಳಿದ್ದರು. ಇದಕ್ಕೆ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ್ದಾರೆದುಷ್ಯಂತ್ ಚೌಟಾಲ.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ40 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿಗೆ ಬಹುಮತಕ್ಕೆ 6 ಸ್ಥಾನ ಕೊರತೆಯಾಗಿತ್ತು. ಬಳಿಕ, 10 ಸದಸ್ಯರನ್ನು ಹೊಂದಿರುವ ಜೆಜೆಪಿ ಬೆಂಬಲ ಪಡೆದು ಸರ್ಕಾರ ರಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.