ಜೈಪುರ: ಕಾಂಗ್ರೆಸ್‌ನ ವಂಶ ರಾಜಕಾರಣದಿಂದಾಗಿ ರಾಷ್ಟ್ರಕ್ಕೆ ದೊಡ್ಡ ನಷ್ಟವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ, ಅಮ್ಮ ಮತ್ತು ಮಗ ಸೇರಿ ಪಕ್ಷವನ್ನು ನಡೆಸುತ್ತಿದ್ದಾರೆ. ಆದರೆ ಪಕ್ಷದಲ್ಲಿ ಎಂದಾದರೂ ಚುನಾವಣೆ ನಡೆದಿದೆಯೇ? ಎಂದು ಪ್ರಶ್ನಿಸಿದರು.
ನಮ್ಮ ಪಕ್ಷವನ್ನು ನೋಡಿ, ಪ್ರಧಾನಿ ನರೇಂದ್ರ ಮೋದಿ ಅವರೇ ಇರಲಿ ಮತ್ತು ಇತರ ನಾಯಕರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಜೆ.ಪಿ. ನಡ್ಡಾ ಅಥವಾ ಅಮಿತ್ ಶಾ ಇರಲಿ, ಅವರೆಲ್ಲ ಎಲ್ಲಿಂದ ಬಂದಿದ್ದಾರೆ? ಅವರೆಲ್ಲರೂ ಸಾಧಾರಣ ಕುಟುಂಬಗಳಿಂದ ಬಂದಿದ್ದಾರೆ. ಯಾರಿಗೂ ರಾಜಕಾರಣದ ಹಿನ್ನೆಲೆಯಾಗಲಿ, ಬಾಹುಬಲವಾಗಲಿ ಅಥವಾ ಹಣ ಬಲವಾಗಲಿ ಇರಲಿಲ್ಲ ಎಂದು ಪ್ರಕಾಶ್ ಜಾವಡೇಕರ್ ವಿವರಿಸಿದ್ದಾರೆ.
ಇತ್ತೀಚೆಗೆ ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಬಿಜೆಪಿ ಮುಖ್ಯಸ್ಥರ ಆಯ್ಕೆ ಕುರಿತಾದ ಪ್ರಶ್ನೆ ಕೇಳಿದ್ದನ್ನು ಉಲ್ಲೇಖಿಸಿ ಜಾವಡೇಕರ್ ವಾಗ್ದಾಳಿ ನಡೆಸಿದರು. ವಂಶ ರಾಜಕಾರಣದಿಂದ ರಾಷ್ಟ್ರಕ್ಕೆ ದೊಡ್ಡ ನಷ್ಟವಾಗಿದೆ. ಇಂತಹದ್ದು ಬೇರೆ ಎಲ್ಲೂ ನಡೆದಿಲ್ಲ ಎಂದರು.
ಕಳೆದ 8 ವರ್ಷಗಳಲ್ಲಿ ಕೇಂದ್ರದ ಯಾವೊಬ್ಬ ಸಚಿವನ ಮೇಲೂ ಭ್ರಷ್ಟಾಚಾರ ಆರೋಪ ವ್ಯಕ್ತವಾಗಿಲ್ಲ. ಇದೇನು ಸಾಮಾನ್ಯ ವಿಚಾರವಲ್ಲ. 2023ರ ರಾಜಸ್ಥಾನ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.