ನವದೆಹಲಿ: ಇ–ಸಿಗರೇಟ್ ಉತ್ಪಾದನೆ, ಆಮದು, ರಫ್ತು, ಮಾರಾಟ ಹಾಗೂ ಅವುಗಳ ಜಾಹೀರಾತು ನಿಷೇಧಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
‘ಇ–ಸಿಗರೇಟ್ ಜನರ ಆರೋಗ್ಯಕ್ಕೆ ಅಪಾಯ ಒಡ್ಡುವುದರಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ನೀಡಿದ್ದಾರೆ. ಇವರು ಇ–ಸಿಗರೇಟ್‌ಗೆ ಸಂಬಂಧಿಸಿದ ಸಚಿವರ ಗುಂಪಿನ (ಜಿಒಎಂ) ನೇತೃತ್ವ ವಹಿಸಿದ್ದಾರೆ.
ರಾಷ್ಟ್ರಪತಿಗಳಿಂದ ಅನುಮತಿ ದೊರೆತ ಬಳಿಕ ಸುಗ್ರೀವಾಜ್ಞೆ ಜಾರಿಗೆ ಬರಲಿದೆ. ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಇದನ್ನು ಮಸೂದೆಯಾಗಿ ಬದಲಿಸಲಾಗುತ್ತದೆ.
ಸುಗ್ರೀವಾಜ್ಞೆಯಲ್ಲಿ ಏನಿದೆ?
lಮೊದಲ ಬಾರಿಗೆ ನಿಯಮ ಉಲ್ಲಂಘಿಸುವವರಿಗೆ ₹1 ಲಕ್ಷ ದಂಡ, 1 ವರ್ಷದವರೆಗೆ ಜೈಲು
lಸತತ ಉಲ್ಲಂಘನೆಗೆ 3 ವರ್ಷದ ತನಕ ಜೈಲು, ₹5 ಲಕ್ಷ ದಂಡ
ಸಿಗರೇಟ್ ಉದ್ದಿಮೆ ರಕ್ಷಿಸುವ ಉದ್ದೇಶ: ಆರೋಪ
‘ಸಿಗರೇಟ್ ಉದ್ದಿಮೆ ರಕ್ಷಿಸುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಈ ಸುಗ್ರೀವಾಜ್ಞೆ ಜಾರಿಗೆ ತರುವ ಕಠಿಣ ಕ್ರಮ ಕೈಗೊಂಡಿದೆ’ ಎಂದು ಇ–ಸಿಗರೇಟ್ ಬಳಕೆ ಉತ್ತೇಜಿಸುವ ವಾಣಿಜ್ಯ ಸಂಘಟನೆಗಳು ಆರೋಪಿಸಿವೆ.
‘ದೇಶದ 11 ಕೋಟಿ ಇ–ಸಿಗರೇಟ್ ಬಳಕೆದಾರರನ್ನು,ಧೂಮಪಾನದ ಸುರಕ್ಷಿತ ಪರ್ಯಾಯ ಆಯ್ಕೆಯಿಂದ ವಂಚಿಸಲಾಗುತ್ತಿದೆ. ಇವರ ಜೀವನ ಅಪಾಯಕ್ಕೆ ಸಿಲುಕಲಿದೆ’ ಎಂದು ಭಾರತೀಯ ಇ–ಸಿಗರೇಟ್ ಬಳಕೆದಾರರ ಸಂಘಟನೆಯ (ಎವಿಐ) ನಿರ್ದೇಶಕ ಸಮ್ರತ್ ಚೌಧರಿ ಅವರು ಪ್ರತಿಕ್ರಿಯಿಸಿದ್ದಾರೆ.
ಅಂಕಿ–ಅಂಶ
1 ಕೋಟಿ:ಭಾರತದಲ್ಲಿ ಪ್ರತಿವರ್ಷ ತಂಬಾಕು ಬಳಕೆಯಿಂದ ಸಾಯುತ್ತಿರುವವರು
12%:ಜಾಗತಿಕ ಧೂಮಪಾನಿಗಳಲ್ಲಿ ಭಾರತೀಯರ ಪ್ರಮಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.