ADVERTISEMENT

Assembly Election Results 2023 | ಮತ್ತೆ ಮೋದಿ ಅಲೆ, ‘ಕೈ’ ತರಗೆಲೆ

ಹಮೀದ್ ಕೆ.
Published 3 ಡಿಸೆಂಬರ್ 2023, 23:51 IST
Last Updated 3 ಡಿಸೆಂಬರ್ 2023, 23:51 IST
   

ಬೆಂಗಳೂರು: ನಾಲ್ಕು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾರ ಸ್ಪ‍ಷ್ಟ ತೀರ್ಪು ನೀಡಿದ್ದಾನೆ. ಉತ್ತರ ಭಾರತದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿಗೆ ಭಾರಿ ಗೆಲುವು ದಕ್ಕಿದೆ. ದಕ್ಷಿಣ ಭಾರತದ ತೆಲಂಗಾಣದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯಲು ಕೆ. ಚಂದ್ರಶೇಖರ ರಾವ್‌ ನೇತೃತ್ವದ ಬಿಆರ್‌ಎಸ್‌ಗೆ (ಈ ಹಿಂದಿನ ಟಿಆರ್‌ಎಸ್‌) ಸಾಧ್ಯವಾಗಿಲ್ಲ. ಆಡಳಿತವಿರೋಧಿ ಅಲೆಯನ್ನು ಅನುಕೂಲಕರವಾಗಿ ಪರಿವರ್ತಿಸಿಕೊಂಡ ಕಾಂಗ್ರೆಸ್‌ ತೆಲಂಗಾಣದಲ್ಲಿ ಗೆದ್ದಿದೆ. ನಾಲ್ಕು ರಾಜ್ಯಗಳ ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಇದೊಂದೇ ಸಮಾಧಾನಕರ ಅಂಶ.

2018ರಲ್ಲಿ ಈ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ರಾಜಸ್ಥಾನ ಮತ್ತು ಛತ್ತೀಸಗಢವನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಮಧ್ಯಪ್ರದೇಶದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರವನ್ನೂ ರಚಿಸಿತ್ತು ಎಂಬ ಅಂಶವು ಕಾಂಗ್ರೆಸ್‌ ಸೋಲಿನ ಆಳ ಮತ್ತು ಬಿಜೆಪಿ ಗೆಲುವಿನ ಮಹತ್ವವನ್ನು ತೋರಿಸುತ್ತದೆ. ಈ ಮೂರೂ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇತ್ತು.

ಭಾನುವಾರ ಫಲಿತಾಂಶ ಪ್ರಕಟಗೊಂಡ ಎಲ್ಲ ನಾಲ್ಕು ರಾಜ್ಯಗಳಲ್ಲಿಯೂ ಚುನಾವಣಾ ನಿರ್ವಹಣೆಯನ್ನು ಬಿಜೆಪಿಯ ವರಿಷ್ಠರೇ ತಮ್ಮ ಕೈಯಲ್ಲಿ ಇರಿಸಿಕೊಂಡಿದ್ದರು. ಸ್ಥಳೀಯ ನಾಯಕತ್ವದ ಕೈಗೆ ಪ್ರಚಾರದ ಚುಕ್ಕಾಣಿಯನ್ನು ಕೊಟ್ಟಿರಲಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ

ADVERTISEMENT

ಯನ್ನೂ ಘೋಷಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಜೋಡಿಯು ಪ್ರಚಾರದ ಹೊಣೆಗಾರಿಕೆಯನ್ನು ಹೆಗಲಿಗೇರಿಸಿಕೊಂಡಿತ್ತು. ವರ್ಚಸ್ವೀ ನಾಯಕರಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮುಂತಾದವರನ್ನೂ ಪ್ರಚಾರಕ್ಕೆ ಬಳಸಿಕೊಳ್ಳಲಾಗಿತ್ತು.

ಆದರೆ, ಕಾಂಗ್ರೆಸ್‌ ಪಕ್ಷವು ಚುನಾವಣೆಯನ್ನು ಹೆಚ್ಚು ಸ್ಥಳೀಯಗೊಳಿಸುವ ಕಾರ್ಯತಂತ್ರ ಅನುಸರಿಸಿತು. ಸ್ಥಳೀಯ ನಾಯಕರೇ ಪ್ರಚಾರದ ನೇತೃತ್ವ ವಹಿಸಿದ್ದರು. ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಲ್ಲಲು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಮತ್ತು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಮಾಡಿದ ಪ್ರಯತ್ನ ಸಾಲಲಿಲ್ಲ. ಮಧ್ಯಪ್ರದೇಶದಲ್ಲಿ ನೀಡಿದ

‘ಗ್ಯಾರಂಟಿ’ಗಳಲ್ಲಿ ಹಲವು ಅಲ್ಲಿ ಈಗಾಗಲೇ ಜಾರಿಯಲ್ಲಿದ್ದ ಯೋಜನೆಗಳ ಮುಂದುವರಿದ ಭಾಗವಾಗಿತ್ತು.

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ‘ಪನೌತಿ’ (ಅಪಶಕುನ) ಎಂದು ಹೇಳುವ ಮೂಲಕ ತಾವೇನೂ ಕಮ್ಮಿ ಇಲ್ಲ ಎಂದು ನಿರೂಪಿಸಿದ್ದರು. ‘ರಾಹುಲ್‌ ಗಾಂಧಿ ಮೂರ್ಖರ ನಾಯಕ’ ಎಂದು ಮೋದಿ ಹೇಳಿದ್ದರು. ಹೀಗೆ ಚುನಾವಣಾ ಪ್ರಚಾರವು ಸೌಜನ್ಯದ ಎಲ್ಲೆಯ ಆಚೆಯೇ ಇತ್ತು. ಕೋಮು ಧ್ರುವೀಕರಣದ ಮಾತುಗಳು ಬಿಜೆಪಿಗೆ ನೆರವಾಗಿವೆ ಎಂದು ಕೂಡ ಫಲಿತಾಂಶವನ್ನು ವಿಶ್ಲೇಷಿಸಲಾಗುತ್ತಿದೆ. 

2018ರಲ್ಲಿ ಇವೇ ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶವನ್ನು ಲೋಕಸಭೆಗೆ 2019ರಲ್ಲಿ ನಡೆಯಲಿರುವ ಚುನಾವಣೆಯ ದಿಕ್ಸೂಚಿ ಎಂದು ಬಣ್ಣಿಸಲಾಗಿತ್ತು. ಆದರೆ, ಆ ಫಲಿತಾಂಶವು ಲೋಕಸಭಾ ಚುನಾವಣೆಯ ದಿಕ್ಸೂಚಿ ಆಗಿರಲಿಲ್ಲ. ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದು ಈ ಬಾರಿಯ ಚುನಾವಣೆಯನ್ನೂ ಬಣ್ಣಿಸಲಾಗಿದೆ. ಪ್ರತಿಕೂಲ ಸನ್ನಿವೇಶವನ್ನೂ ತನ್ನ ಪರವಾಗಿ ಪರಿವರ್ತಿಸಿಕೊಳ್ಳಬಲ್ಲ ಬಿಜೆಪಿಯ ಶಕ್ತಿಯನ್ನು ಗಮನಿಸಿದರೆ, ಈ ಬಾರಿಯ ಫಲಿತಾಂಶವು ಲೋಕಸಭಾ ಚುನಾವಣೆಯ ದಿಕ್ಸೂಚಿ ಆದರೂ ಅಚ್ಚರಿ ಇಲ್ಲ. 

ಈ ಫಲಿತಾಂಶದಿಂದ ನಿಚ್ಚಳವಾದ ಇನ್ನೊಂದು ಮಹತ್ವದ ಅಂಶ ಇದೆ. ಉತ್ತರ ಭಾರತದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳುವುದು ಕಾಂಗ್ರೆಸ್‌ಗೆ ಇನ್ನು ಬಹಳ ಕಷ್ಟವಿದೆ. ಆದರೆ, ದಕ್ಷಿಣ ಭಾರತದ ಜನರು ಬಿಜೆಪಿಗಿಂತ ಕಾಂಗ್ರೆಸ್‌ನ ಮೇಲೆ ಹೆಚ್ಚು ಒಲವು ಇರಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಉತ್ತರ ಭಾರತದ ಪಕ್ಷ ಎಂಬುದು ಮತ್ತೊಮ್ಮೆ ನಿರೂಪಿತವಾಗಿದೆ.

ಮಿತ್ರಪಕ್ಷಗಳ ಜೊತೆ ಕಾಂಗ್ರೆಸ್‌ ಅಸಡ್ಡೆಯಿಂದ ವರ್ತಿಸುತ್ತದೆ ಎಂಬುದು ಮತ್ತೊಮ್ಮೆ ಸ್ಪಷ್ಟಪಟ್ಟಿದೆ. ಬಿಜೆಪಿವಿರೋಧಿ ಪಕ್ಷಗಳು ಒಟ್ಟಾಗಿ ‘ಇಂಡಿಯಾ’ ಎಂಬ ಮೈತ್ರಿಕೂಟವನ್ನು ರೂಪಿಸಿಕೊಂಡಿದ್ದವು. ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧಿಸುವುದು ಇದರ ಉದ್ದೇಶವಾಗಿತ್ತು. ‘ಇಂಡಿಯಾ’ ಕೂಟದ ಸದಸ್ಯರನ್ನು ಕಾಂಗ್ರೆಸ್‌ ಪಕ್ಷವು ಚುನಾವಣೆ ಸಂದರ್ಭದಲ್ಲಿ ಹತ್ತಿರಕ್ಕೆ ಸೇರಿಸಿಕೊಳ್ಳಲಿಲ್ಲ. ಬಿಜೆಪಿಗೆ ಎಲ್ಲವೂ ಪೂರಕವಾಗಿ ಪರಿವರ್ತಿತವಾದರೆ, ಕಾಂಗ್ರೆಸ್‌ಗೆ ಕರ್ನಾಟಕದ ಗೆಲುವಿನ ‘ಪ್ರಭಾವಳಿ’ಯಲ್ಲಿ ಸಿಕ್ಕ ತೆಲಂಗಾಣವೇ ಸಮಾಧಾನ. 

ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ 5 ಅಂಶ

  1. ನರೇಂದ್ರ ಮೋದಿ ಅವರನ್ನೇ ಪಕ್ಷದ ಏಕೈಕ ಮುಖವಾಗಿಸಿಕೊಂಡು ಪ್ರಚಾರಕ್ಕೆ ಇಳಿಯಲಾಯಿತು

  2. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢದಲ್ಲಿ ಯಾವುದೇ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸದೆ ಇರುವ ತಂತ್ರ ಫಲ ನೀಡಿತು

  3. ಕೇಂದ್ರದ ಸಚಿವರು ಸೇರಿದಂತೆ ಹಲವು ಸಂಸದರನ್ನು ಕಣಕ್ಕಿಳಿಸಲಾಯಿತು. ಪ್ರಭಾವಿ ನಾಯಕರು ತಾವು ಗೆಲ್ಲುವುದರ ಜತೆಗೆ ಪಕ್ಕದ ಕ್ಷೇತ್ರಗಳ ಅಭ್ಯರ್ಥಿಗಳನ್ನೂ ಗೆಲ್ಲಿಸಿದರು

  4. ‌ಕಾಂಗ್ರೆಸ್‌, ಜಾತಿ ಜನಗಣತಿ ನಡೆಸುವ ಕುರಿತು ಪ್ರಚಾರದ ಉದ್ದಕ್ಕೂ ದೊಡ್ಡ ಸದ್ದು ಮಾಡಿತು. ‘ಬಡತನವೇ ದೊಡ್ಡ ಜಾತಿಭೂತ. ನಾವು ಅದನ್ನು ತೊಲಗಿಸಬೇಕು’ ಎನ್ನುವ ಮೂಲಕ ಮೋದಿ ಜಾತಿ ಜನಗಣತಿಯ ‘ಅಸ್ತ್ರ’ಕ್ಕೆ ಪ್ರತ್ಯುತ್ತರ ನೀಡಿದರು

  5. ಹಿಂದಿ ಭಾಷಿಕ ರಾಜ್ಯಗಳಲ್ಲಿ ಎಸ್‌.ಸಿ, ಎಸ್‌.ಟಿ ಮತ್ತು ಮಹಿಳೆಯರ ಮತಗಳನ್ನು ಗಣನೀಯವಾಗಿ ಪಡೆಯುವಲ್ಲಿ ಸಫಲವಾಗಿದ್ದೂ ಪಕ್ಷವನ್ನು ಗೆಲುವಿನ ದಡಕ್ಕೆ ತಲುಪಿಸಿತು

ಜಾತಿ ಗಣತಿಗಿಲ್ಲ ಮನ್ನಣೆ

ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸುವುದಾಗಿ ಕಾಂಗ್ರೆಸ್ ಪಕ್ಷವು ಭರವಸೆ ಕೊಟ್ಟಿತ್ತು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವುದಾಗಿಯೂ ಹೇಳಿತ್ತು. ಆದರೆ, ಇದು ಜನರನ್ನು ಜಾತಿ ಹೆಸರಿನಲ್ಲಿ ವಿಭಜಿಸುವ ಯತ್ನ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಒಬಿಸಿ ಮತ್ತು ಪರಿಶಿಷ್ಟರ ಮತಗಳನ್ನು ಜಾತಿಗಣತಿಯ ಮೂಲಕ ಸೆಳೆಯಬಹುದು ಎಂಬುದು ಕಾಂಗ್ರೆಸ್‌ ಪಕ್ಷದ ಲೆಕ್ಕಾಚಾರವಾಗಿತ್ತು. ಈ ಲೆಕ್ಕಾಚಾರ ತಲೆಕೆಳಗಾಗಿದೆ. ಜಾತಿಗಣತಿಯ ಭರವಸೆಯು ಕಾಂಗ್ರೆಸ್‌ಗೆ ಮತ ತಂದು ಕೊಟ್ಟಿಲ್ಲ.

ಕೆಸಿಆರ್ ಹ್ಯಾಟ್ರಿಕ್‌ ಕನಸು ಭಗ್ನ
ಭಾರತ ರಾಷ್ಟ್ರ ಸಮಿತಿಯ ಕೆ.ಚಂದ್ರಶೇಖರ ರಾವ್ ಅವರು ಸತತ ಮೂರನೇ ಅವಧಿಗೆ ಮುಖ್ಯಮಂತ್ರಿ ಯಾಗುವ ಕನಸು ಕಂಡಿದ್ದರು. ಜೊತೆಗೆ, ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ರಾಷ್ಟ್ರ ರಾಜಕಾರಣ ದಲ್ಲಿ ಮಹತ್ವದ ಪಾತ್ರ ವಹಿಸಬೇಕು, ಕಾಂಗ್ರೆಸ್‌ ಇಲ್ಲದ ಪರ್ಯಾಯ ರಂಗವೊಂದನ್ನು ಕಟ್ಟಬೇಕು ಎಂಬ ಉಮೇದಿನಲ್ಲಿದ್ದರು. ಆದರೆ, ವ್ಯಾಪಕವಾಗಿದ್ದ ಆಡಳಿತವಿರೋಧಿ ಅಲೆಯಿಂದಾಗಿ ಹ್ಯಾಟ್ರಿಕ್‌ ಗೆಲುವು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಅವರ ರಾಷ್ಟ್ರ ರಾಜಕಾರಣದ ಕನಸು ಸದ್ಯದ ಮಟ್ಟಿಗೆ ಭಗ್ನಗೊಂಡಂತಾಗಿದೆ.

ಸಿ.ಎಂ ಆಕಾಂಕ್ಷಿಗಳು

ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿ ಹುದ್ದೆಗೆ ಭಾರಿ ಪೈಪೋಟಿ ಏರ್ಪಟ್ಟಿದೆ. ಯಾರು, ಯಾರು ಪೈಪೋಟಿಯಲ್ಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ

ರಾಜಸ್ಥಾನ: ದಿಯಾ ಕುಮಾರಿ, ವಸುಂಧರಾ ರಾಜೇ, ಗಜೇಂದ್ರ ಸಿಂಗ್‌ ಶೆಖಾವತ್‌, ಮಹಂತ ಬಾಲಕನಾಥ, ಕಿರೋಡಿ ಮಲ್‌ ಮೀನಾ, ಸಿ.ಪಿ. ಜೋಶಿ, ಅರ್ಜುನ್‌ ಸಿಂಗ್‌ ಮೇಘವಾಲ್‌, ಓಂ ಬಿರ್ಲಾ

ಮಧ್ಯ ಪ್ರದೇಶ: ಶಿವರಾಜ್‌ ಸಿಂಗ್‌ ಚೌಹಾಣ್‌, ಜ್ಯೋತಿರಾದಿತ್ಯ ಸಿಂಧಿಯಾ, ನರೇಂದ್ರ ಸಿಂಗ್‌ ತೋಮರ್‌

ಛತ್ತೀಸಗಢ: ರಮಣ ಸಿಂಗ್‌, ಅರುಣ್‌ ಕುಮಾರ್‌ ಸಾವ್‌, ಧರಮ್‌ ಲಾಲ್‌ ಕೌಶಿಕ್‌, ಒ.ಪಿ. ಚೌಧರಿ

ತೆಲಂಗಾಣ: ರೇವಂತ ರೆಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.