ADVERTISEMENT

ಹಿಂದಿನ ಸರ್ಕಾರಗಳಿಂದ ಕನಸುಗಳ ಮಾರಾಟ, ಮೋದಿ ಸರ್ಕಾರದಿಂದ ಕನಸು ಈಡೇರಿಕೆ: ನಿರ್ಮಲಾ

ಪಿಟಿಐ
Published 10 ಆಗಸ್ಟ್ 2023, 11:47 IST
Last Updated 10 ಆಗಸ್ಟ್ 2023, 11:47 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್    

ನವದೆಹಲಿ: ಜಾಗತಿಕ ಆರ್ಥಿಕತೆಯು ಹಣದುಬ್ಬರ ಮತ್ತು ಬೆಳವಣಿಗೆ ಕುಂಠಿತ ಸವಾಲುಗಳನ್ನು ಎದುರಿಸುತ್ತಿದೆ. ಆದರೆ, ಭಾರತವು ತನ್ನ ಭವಿಷ್ಯದ ಬೆಳವಣಿಗೆಯ ಬಗ್ಗೆ ಆಶಾವಾದಿ ಮತ್ತು ಸಕಾರಾತ್ಮಕತೆಯನ್ನು ಹೊಂದುವ ಮೂಲಕ ವಿಶಿಷ್ಟ ಸ್ಥಾನದಲ್ಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳು ಜನರಿಗೆ ಕನಸುಗಳನ್ನು ಮಾರಾಟ ಮಾಡುತ್ತಿದ್ದವು. ಆದರೆ, ಈಗಿನ (ಬಿಜೆಪಿ) ಆಡಳಿತವು ಕನಸುಗಳನ್ನು ನನಸಾಗಿಸುತ್ತಿದೆ ಎಂದು ತಿಳಿಸಿದರು.

2013ರಲ್ಲಿ ವಿಶ್ವದ ಐದು ದುರ್ಬಲ ಆರ್ಥಿಕತೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಸೇರಿತ್ತು. ಆದರೆ, ಈಗ ಕೇವಲ ಒಂಬತ್ತು ವರ್ಷಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ದೇಶವಾಗಿದೆ ಎಂದು ಸೀತಾರಾಮನ್‌ ಹೇಳಿದರು.

ADVERTISEMENT

ಹಿಂದಿನ ಯುಪಿಎ (ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್) ಆಡಳಿತವು 2004 ರಿಂದ 2014ರವರೆಗಿನ ಇಡೀ ದಶಕವನ್ನು ವ್ಯರ್ಥ ಮಾಡಿದೆ ಎಂದು ಸೀತಾರಾಮನ್‌ ಆರೋಪಿಸಿದರು.

ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ‘ಗರೀಬಿ ಹಟಾವೋ’ ಎಂಬ ಘೋಷಣೆಯನ್ನು ಉಲ್ಲೇಖಿಸಿದ ಸೀತಾರಾಮನ್‌ ಬಡತನವನ್ನು ನಿಜವಾಗಿಯೂ ತೊಡೆದುಹಾಕಲು ಸಾಧ್ಯವೇ ಎಂದು ಪ್ರಶ್ನಿಸಿದರು. ಆದರೆ, ಪ್ರಧಾನಿ ಮೋದಿ ಆಡಳಿತದಲ್ಲಿ ಸಂಪೂರ್ಣ ಬದಲಾವಣೆಯಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.