ADVERTISEMENT

ಲಡಾಖ್‌: ಸೇನೆ ವಾಪಸಾತಿ ಪೂರ್ಣ, ಒಪ್ಪಂದ ಜಾರಿ ಯಶಸ್ವಿ

ಪೂರ್ವ ಲಡಾಖ್‌ನಲ್ಲಿ ಗಸ್ತು ಶೀಘ್ರ ಆರಂಭ: ಒಪ್ಪಂದ ಜಾರಿ ಯಶಸ್ವಿ

ಪಿಟಿಐ
Published 31 ಅಕ್ಟೋಬರ್ 2024, 0:01 IST
Last Updated 31 ಅಕ್ಟೋಬರ್ 2024, 0:01 IST
   

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ಡೆಮ್‌ಚೋಕ್‌ ಮತ್ತು ಡೆ‍ಪ್ಸಾಂಗ್‌ ಬಯಲಿನಲ್ಲಿ ಎರಡೂ ದೇಶಗಳು ನಿಯೋಜಿಸಿದ್ದ ಸೇನೆಯನ್ನು ಹಿಂದಕ್ಕೆ ಪಡೆಯುವ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಭಾರತೀಯ ಸೇನೆಯ ಮೂಲಗಳು ಬುಧವಾರ ತಿಳಿಸಿವೆ. ಎರಡೂ ದೇಶಗಳ ನಡುವೆ ಆಗಿರುವ ಒಪ್ಪಂದಕ್ಕೆ ಅನುಗುಣವಾಗಿ ಈ ಕಾರ್ಯಾಚರಣೆ ನಡೆದಿದೆ.  

ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಗಸ್ತು ನಡೆಸುವ ಮತ್ತು ಸೇನೆಯ ವಾಪಸಾತಿ ಸಂಬಂಧ ಉಭಯ ದೇಶಗಳ ನಡುವೆ ಏರ್ಪಟ್ಟ ಒಪ್ಪಂದದ ಅನುಸಾರ ಈ ಪ್ರಕ್ರಿಯೆ ನಡೆದಿದೆ.

ಈ ರೀತಿಯಲ್ಲಿ ಒಮ್ಮತ ಸಾಧ್ಯವಾದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾಗಿದ್ದರು. ಸೇನೆ ಹಿಂದಕ್ಕೆ ಪಡೆದು ಗಸ್ತು ಆರಂಭಿಸಲು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದರು.  

ADVERTISEMENT

ಗಸ್ತು ತಿರುಗುವಿಕೆಗೆ ಸಂಬಂಧಿಸಿ ಎರಡೂ ದೇಶಗಳ ನಡುವೆ ಸಮನ್ವಯ ಇರಬೇಕು. ಗಸ್ತು ಸಂದರ್ಭದಲ್ಲಿ ಪರಸ್ಪರರು ಮುಖಾಮುಖಿ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಆ ಬಳಿಕವೇ ಗಸ್ತು ಆರಂಭವಾಗಬೇಕು ಎಂದು ಎರಡೂ ಕಡೆಯವರು ತೀರ್ಮಾನಿಸಿದ್ದರು. ಭಾರತದ ಕಡೆಯಲ್ಲಿ ಇದೇ 31ರಂದು ಗಸ್ತು ಆರಂಭವಾಗುವ ಸಾಧ್ಯತೆ ಇದೆ. 

ಈ ಬೆಳವಣಿಗೆಯ ಬೆನ್ನಿಗೇ, ಭಾರತದ ಮೂರೂ ಸೇನೆಗಳು ಪೂರ್ವಿ ಪ್ರಹಾರ್‌ ಎಂಬ ಸಮರಾಭ್ಯಾಸವನ್ನು ನಡೆಸಲಿವೆ. ಇದು ನವೆಂಬರ್‌ 8ರಿಂದ ನಡೆಯಲಿದೆ. ಪಶ್ಚಿಮ ಬಂಗಾಳ ಮತ್ತು ಅರುಣಾಚಲ ಪ್ರದೇಶದಲ್ಲಿ ಈ ಕವಾಯತು ನಡೆಯಲಿದೆ. 

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಸೈನಿಕರ ಜೊತೆಗೆ ಗುರುವಾರ ದೀಪಾವಳಿ ಆಚರಿಸಲಿದ್ದಾರೆ. 

ಕಳೆದ ನಾಲ್ಕು ವರ್ಷಗಳಿಂದ ಎರಡೂ ದೇಶಗಳ ನಡುವೆ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಾಲ್ವನ್‌ ಕಣಿವೆಯಲ್ಲಿ ಹಿಂಸಾತ್ಮಕ ಮುಖಾಮುಖಿಯು  ನಡೆದಿತ್ತು. 1962ರ ಯುದ್ಧದ ನಂತರ ಇದುವೇ ಅತ್ಯಂತ ದೊಡ್ಡ ಮುಖಾಮುಖಿಯಾಗಿತ್ತು. ಈಗ, ಸಂಘರ್ಷಕ್ಕೆ ಕಾರಣವಾದ ಕೊನೆಯ ಎರಡು ಪ್ರದೇಶಗಳಾದ ಡೆಮ್‌ಚೋಕ್‌ ಮತ್ತು ಡೆಪ್ಸಾಂಗ್‌ ವಿಚಾರದಲ್ಲಿಯೂ ಒಮ್ಮತಕ್ಕೆ ಬರಲು ಸಾಧ್ಯವಾಗಿದೆ. 

ವಾರದ ಕಾರ್ಯಾಚರಣೆ

ಸೇನೆ ವಾಪಸಾತಿ ಭಾಗವಾಗಿ ಸೇನೆ ಶಸ್ತ್ರಾಸ್ತ್ರ ಯುದ್ಧೋಪಕರಣಗಳು ಮತ್ತು ಡೇರೆಗಳನ್ನು 2020ರ ಏಪ್ರಿಲ್‌ಗಿಂತ ಹಿಂದೆ ಇದ್ದ ಸ್ಥಳಗಳಿಗೆ ಸಾಗಿಸಬೇಕು. ಈ ಕಾರ್ಯಾಚರಣೆಗೆ ವಾರಕ್ಕೂ ಹೆಚ್ಚು ಸಮಯ ಬೇಕಾಯಿತು.  ಸೇನೆ ವಾಪಸಾತಿಯು ಇದೇ 29ರೊಳಗೆ ಪೂರ್ಣಗೊಳ್ಳಬಹುದು ಎಂದು ಸೇನೆಯ ಮೂಲಗಳು 25ರಂದು ಹೇಳಿದ್ದವು.  ಸೇನೆ ವಾಪಸಾತಿಯು ಪೂರ್ಣಗೊಂಡಿದೆ ಎಂಬುದನ್ನು ದೃಢಪಡಿಸಿಕೊಂಡ ನಂತರ ಗಸ್ತು ಆರಂಭವಾಗಲಿದೆ. ಅದಕ್ಕೂ ಮುಂಚೆ ಕಮಾಂಡರ್‌ಗಳ ಮಟ್ಟದ ಸಭೆ ನಡೆಯಲಿದೆ. 

ಸಿಹಿ ವಿನಿಮಯ ಮತ್ತೆ ಶುರು

ಹಬ್ಬದ ಸಂದರ್ಭಗಳಲ್ಲಿ ಸಿಹಿ ವಿನಿಮಯದ ಪರಂಪರೆ ಮತ್ತೆ ಆರಂಭವಾಗಲಿದೆ. ಭಾರತದ ಯೋಧರು ಚೀನಾ ಸೈನಿಕರಿಗೆ ದೀಪಾಳಿಯ ಪ್ರಯುಕ್ತ ಸಿಹಿಯನ್ನು ಗುರುವಾರ ನೀಡಲಿದ್ದಾರೆ. ಎರಡೂ ಸೇನೆಗಳ ನಡುವೆ ವಾಸ್ತವ ನಿಯಂತ್ರಣ ರೇಖೆಯಲ್ಲಿ ಸಂಘರ್ಷ ಆರಂಭವಾದ ಬಳಿಕ ಸಿಹಿ ಹಂಚಿಕೆಯನ್ನು ನಿಲ್ಲಿಸಲಾಗಿತ್ತು.   

ಕ್ರಮಬದ್ಧವಾಗಿ ಸೇನೆ ಹಿಂದಕ್ಕೆ: ಚೀನಾ

ಬೀಜಿಂಗ್: ಲಡಾಖ್‌ನಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜಿಸಿರುವ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಚಾರವಾಗಿ ಭಾರತ ಮತ್ತು ಚೀನಾ ಕೈಗೊಂಡಿರುವ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವ ಕೆಲಸವು ‘ಕ್ರಮಬದ್ಧವಾಗಿ’ ಆಗುತ್ತಿದೆ ಎಂದು ಚೀನಾ ಹೇಳಿದೆ.  ಗಡಿಯ ವಿಚಾರವಾಗಿ ಭಾರತ ಮತ್ತು ಚೀನಾ ನಿರ್ಣಯ ಕೈಗೊಂಡಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದ್ದಾರೆ. ಭಾರತ ಮತ್ತು ಚೀನಾದ ಯೋಧರು ಈಗ ನಿರ್ಣಯಗಳನ್ನು ಕ್ರಮಬದ್ಧವಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ಜಿಯಾನ್ ತಿಳಿಸಿದರು. ಆದರೆ ಅವರು ಹೆಚ್ಚಿನ ವಿವರ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.