ನವದೆಹಲಿ: ಹಕ್ಕಿಜ್ವರ ಕುರಿತ ಭೀತಿ ಮತ್ತು ಗೊಂದಲ ನಿವಾರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹಕ್ಕಿಜ್ವರ ವರದಿಯಾಗಿರುವ ಪ್ರದೇಶಗಳಲ್ಲಿ ಹೊರತುಪಡಿಸಿ, ಇತರ ತಾಣಗಳಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟದ ಮೇಲೆ ವಿಧಿಸಲಾಗಿರುವ ನಿರ್ಬಂಧ ತೆರವುಗೊಳಿಸಬೇಕು ಎಂದು ಕೇಂದ್ರ ಮೀನುಗಾರಿಕೆ ಸಚಿವಾಲಯ ಹೇಳಿದೆ. ಸರಿಯಾದ ಬೇಯಿಸಿದ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಗೆ ಸೂಕ್ತವಾಗಿದ್ದು, ಆಧಾರರಹಿತ ಗಾಳಿಸುದ್ದಿ ನಂಬದೆ, ಗೊಂದಲ ನಿವಾರಿಸಿಕೊಳ್ಳಿ ಎಂದು ಜನರಿಗೆ ಸಚಿವಾಲಯ ಸೂಚನೆ ನೀಡಿದೆ.
ಕೋಳಿ, ಮೊಟ್ಟೆ ತಿನ್ನಲು ಅಡ್ಡಿಯಿಲ್ಲ..
ರಾಷ್ಟ್ರದ ವಿವಿಧೆಡೆ ಹಕ್ಕಿಜ್ವರ ಪ್ರಕರಣ ವರದಿ ಮತ್ತು ಪಕ್ಷಿಗಳ ಸಾವಿನ ಬಳಿಕ ಜನರಲ್ಲಿ ಭೀತಿಯುಂಟಾಗಿದೆ. ಅಲ್ಲದೆ, ಕೋಳಿ ಮಾಂಸ ಮತ್ತು ಮೊಟ್ಟೆ ಮೇಲೆ ಹಲವು ರಾಜ್ಯಗಳಲ್ಲಿ ಮಾರಾಟ ನಿರ್ಬಂಧ ಕೂಡ ಹೇರಲಾಗಿದೆ. ಆದರೆ ಸರಿಯಾದ ರೀತಿಯಲ್ಲಿ ಶುದ್ಧೀಕರಿಸಿ ಬೇಯಿಸಿದ ಕೋಳಿಮಾಂಸ ಮತ್ತು ಮೊಟ್ಟೆ ತಿನ್ನುವುದರಿಂದ, ಯಾವುದೇ ಸಮಸ್ಯೆಯಿಲ್ಲ ಎಂದು ಸಚಿವಾಲಯ ಹೇಳಿದೆ.
ಸರಿಯಾಗಿ ಬೇಯಿಸಿದ ಕೋಳಿ ಮಾಂಸ ಸುರಕ್ಷಿತ
70 ಡಿಗ್ರಿಗೂ ಅಧಿಕ ತಾಪಮಾನದಲ್ಲಿ ಮತ್ತು ಕನಿಷ್ಠ 30 ನಿಮಿಷ ಬೇಯಿಸಿದ ಕೋಳಿಮಾಂಸ ಸುರಕ್ಷಿತ. ಅದರ ಸೇವನೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅಲ್ಲದೆ, ಮೊಟ್ಟೆ ಸೇವನೆ ಕೂಡ ಸುರಕ್ಷಿತ. ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದು ಸರ್ಕಾರ ತಿಳಿಸಿದೆ.
ಸರ್ಕಾರದ ಜಾಗೃತಿ
ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಕೆಲ ಜಿಲ್ಲೆಗಳಲ್ಲಿ ಹಕ್ಕಿಜ್ವರ ಪ್ರಕರಣ ವರದಿಯಾಗಿತ್ತು. ಆದರೆ ಜನರಲ್ಲಿ ಗೊಂದಲ ನಿವಾರಿಸಲು ಕೇಂದ್ರ ಸರ್ಕಾರದ ಸೂಚನೆಯಂತೆ, ರಾಜ್ಯ ಸರ್ಕಾರ ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತು ನೀಡಿ ಜಾಗೃತಿ ಮೂಡಿಸಲು ಮುಂದಾಗಿದೆ.
ಇದನ್ನೂ ಓದಿ:ದೆಹಲಿ: 2020ರಲ್ಲಿ 3,600 ಪಕ್ಷಿಗಳ ರಕ್ಷಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.