ಮುಂಬೈ: ರಾಜಕೀಯ ಹಗ್ಗಜಗ್ಗಾಟದ ನಡುವೆಯೇ ಚುನಾವಣಾ ಆಯೋಗವು (ಇ.ಸಿ) ಸೋಮವಾರ ಉದ್ಧವ್ ಠಾಕ್ರೆ ಬಣಕ್ಕೆ ನೂತನ ಚಿಹ್ನೆ ಹಾಗೂ ಹೆಸರನ್ನು ನೀಡಿದೆ.
ಉದ್ದವ್ ಬಣಕ್ಕೆ 'ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ)' ಎಂಬ ಹೆಸರು ಮತ್ತು 'ಪಂಜು' (ಉರಿಯುತ್ತಿರುವ ಟಾರ್ಚ್) ಚಿಹ್ನೆಯನ್ನು ಚುನಾವಣಾ ಆಯೋಗವು ನೀಡಿದೆ.
ಮತ್ತೊಂದೆಡೆ ಏಕನಾಥ ಶಿಂದೆ ಬಣಕ್ಕೆ 'ಬಾಳಾಸಾಹೇಬಾಂಚಿ ಶಿವಸೇನಾ' ಎಂಬ ಹೆಸರನ್ನು ನೀಡಿದೆ.
ಹಾಗಿದ್ದರೂ ಏಕನಾಥ ಶಿಂದೆ ಸಲಹೆ ಮಾಡಿದ ಚಿಹ್ನೆಗಳನ್ನು ಚುನಾವಣಾ ಆಯೋಗವು ಅಂಗೀಕರಿಸಿಲ್ಲ. ಅಲ್ಲದೆ ಹೊಸ ಪಟ್ಟಿಯನ್ನು ಸಲ್ಲಿಸಲು ಮಂಗಳವಾರ ಬೆಳಿಗ್ಗೆಯ ವರೆಗೆ ಕಾಲಾವಕಾಶ ನೀಡಲಾಗಿದೆ.
ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ನ.3ರಂದು ಉಪಚುನಾವಣೆ ನಡೆಯಲಿದ್ದು, ಶಿವಸೇನಾದ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಗಳ ನಡುವೆ ಪಕ್ಷದ ಹೆಸರು ಮತ್ತು ಚಿಹ್ನೆಗಳ ಬಳಕೆಗೆ ಸಂಬಂಧಿಸಿದಂತೆ ಪೈಪೋಟಿ ಎದುರಾಗಿತ್ತು.
ಈ ನಡುವೆ ಶಿವಸೇನಾದ ಹೆಸರು ಅಥವಾ ಚಿಹ್ನೆಯಾದ ಬಿಲ್ಲು–ಬಾಣವನ್ನು ಉಪಯೋಗಿಸುವಂತಿಲ್ಲ ಎಂದು ಚುನಾವಣಾ ಆಯೋಗ ಉಭಯ ಬಣಗಳಿಗೆ ನಿರ್ಬಂಧ ವಿಧಿಸಿತ್ತು.
ಏತನ್ಮಧ್ಯೆ ಶಿವಸೇನಾ ಚಿಹ್ನೆ ಮತ್ತು ಹೆಸರನ್ನು ಚುನಾವಣಾ ಆಯೋಗವು ಮುಟ್ಟುಗೋಲು ಹಾಕಿಕೊಂಡಿರುವುದನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸೋಮವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.